in

ಫೆಬ್ರವರಿ 13 ರಂದು ವಿಶ್ವ ರೇಡಿಯೋ ದಿನವನ್ನು ಆಚರಿಸಲಾಗುತ್ತದೆ

ವಿಶ್ವ ರೇಡಿಯೋ ದಿನ
ವಿಶ್ವ ರೇಡಿಯೋ ದಿನ

ರೇಡಿಯೋ ಒಂದು ಶ್ರಾವ್ಯ ಮಾಧ್ಯಮ. ಒಂದು ಕಾಲದಲ್ಲಿ ಗ್ರಾಮೀಣ ಭಾರತದ ಇಂಚು ಇಂಚನ್ನು ತಲುಪಿತ್ತು. ದೇಶದ ಜನತೆ ರೇಡಿಯೋದೊಂದಿಗೆ ಭಾವನಾತ್ಮಕ ಅನುಬಂಧವನ್ನಿಟ್ಟುಕೊಂಡಿದ್ದಾರೆ. ಈ ಅನುಬಂಧವನ್ನು ಸ್ಮರಿಸಲು ವಿಶ್ವ ರೇಡಿಯೋ ದಿನಾಚರಣೆ ಒಂದು ಪ್ರಶಸ್ತ ವೇದಿಕೆ.

ರೇಡಿಯೋ ಪ್ರಸಾರದಲ್ಲಿ ಅಂತಾರಾಷ್ಟ್ರೀಯ ಸಹಕಾರವನ್ನು ಸುಧಾರಿಸಲು ಮತ್ತು ರೇಡಿಯೋದ ಮಹತ್ವವನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ವಿಶ್ವಸಂಸ್ಥೆಯ ಅಂಗಸಂಸ್ಥೆಯಾಗಿರುವ ಯುನೆಸ್ಕೋ ಪ್ರತಿವರ್ಷ ಫೆಬ್ರವರಿ 13ರಂದು ವಿಶ್ವ ರೇಡಿಯೋ ದಿನವನ್ನು ಆಚರಿಸುತ್ತದೆ. ವಿಶ್ವಸಂಸ್ಥೆಯ ಇಂಟರ್‌ನ್ಯಾಶನಲ್‌ ಬ್ರ್ಯಾಂಡ್‌ಕಾಸ್ಟ್‌ ಸರ್ವಿಸ್‌ 1946ರ ಫೆ. 13ರಂದು ಆರಂಭವಾಗಿರುವುದು ಇದೇ ದಿನಾಂಕವನ್ನು ಆರಿಸಿಕೊಳ್ಳಲು ಇನ್ನೊಂದು ಕಾರಣ.

ಫೆಬ್ರವರಿ 13 ರಂದು ವಿಶ್ವ ರೇಡಿಯೋ ದಿನವನ್ನು ಆಚರಿಸಲಾಗುತ್ತದೆ
ರೇಡಿಯೋ

ಆಲ್‌ ಇಂಡಿಯಾ ರೇಡಿಯೋ ವಿಶ್ವದ ಅತಿದೊಡ್ಡ ರೇಡಿಯೋ ನೆಟ್‌ವರ್ಕ್‌ ಎಂಬ ಖ್ಯಾತಿಯನ್ನು ಹೊಂದಿದೆ. 1936ರ ಜೂನ್‌ 8ರಂದು ಆಲ್‌ ಇಂಡಿಯಾ ರೇಡಿಯೋ ಸ್ಥಾಪನೆಯಾಯಿತು. ಇದು ದೇಶದ ಜನಸಂಖ್ಯೆಯ ಶೇ. 99.19ರಷ್ಟು ಜನರನ್ನು ತಲುಪುತ್ತಿದೆ. 23 ಭಾಷೆಗಳಲ್ಲಿ ಆಲ್‌ ಇಂಡಿಯಾ ರೇಡಿಯೋ ಪ್ರಸಾರವಾಗುತ್ತದೆ. ಕುಗ್ರಾಮಗಳನ್ನು ಕೂಡ ತಲುಪಿರುವ ಮಾಧ್ಯಮ ಇದಾಗಿದೆ.

‘ಓಲ್ಡ್‌ ಈಸ್ ಗೋಲ್ಡ್‌’ ಎಂಬ ಮಾತಿದೆ. ಈ ಮಾತಿಗೆ ರೇಡಿಯೋ ಸರಿಯಾದ ಉದಾಹರಣೆ. ಒಂದು ಕಾಲದಲ್ಲಿ ಜನರ ಜೀವನಾಡಿಯಾಗಿದ್ದ ರೇಡಿಯೋ, ಇಂದಿನ ಡಿಜಿಟಲ್ ಲೋಕದಲ್ಲಿ ಮರೆಯಾಗುತ್ತಿದ್ದರೂ, ಅದರ ಮಹತ್ವ ಮಾತ್ರ ಹಾಗೇ ಇದೆ. ಅಷ್ಟೇ ಅಲ್ಲ, ಇಂದಿಗೂ ವಿಶ್ವದಲ್ಲಿ ಅತೀ ಹೆಚ್ಚು ಬಳಕೆ ಮಾಡುತ್ತಿರುವ ಸಾಮೂಹಿಕ ಮಾಧ್ಯಮಗಳಲ್ಲಿ ರೇಡಿಯೋನೇ ಅಗ್ರಸ್ಥಾನದಲ್ಲಿದೆ.

ಅದೇ ಕಾರಣಕ್ಕೆ ಪ್ರತಿ ವರ್ಷ ಫೆಬ್ರವರಿ 13 ರಂದು ವಿಶ್ವ ರೇಡಿಯೋ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತದೆ. ಹೆಸರೇ ಸೂಚಿಸುವಂತೆ, ಈ ದಿನವು ರೇಡಿಯೋ ಬಳಕೆಗೆ ಜನರನ್ನು ಉತ್ತೇಜಿಸಲು ಮತ್ತು ಪ್ರೋತ್ಸಾಹಿಸಲು ಉದ್ದೇಶಿಸಲಾಗಿದ್ದು, ಇನ್ನೊಂದು ಪ್ರಮುಖ ಭಾಗವೆಂದರೆ ರೇಡಿಯೊದ ಇತಿಹಾಸದ ಬಗ್ಗೆ ಹೆಚ್ಚು ಹೆಚ್ಚು ಜನರಿಗೆ ಅರಿವು ಮೂಡಿಸುವುದು.

2010 ರಲ್ಲಿ ಸ್ಪೇನ್‌ನ ಸ್ಪ್ಯಾನಿಷ್ ರೇಡಿಯೋ ಅಕಾಡೆಮಿಯು ವಿಶ್ವ ರೇಡಿಯೋ ದಿನವನ್ನು ಆಚರಿಸುವ ಬೇಡಿಯಕೆಯನ್ನು ಯುನೆಸ್ಕೋದ ಮುಂದಿಟ್ಟಿತು. 2012 ರಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇದನ್ನು ಅನುಮೋದಿಸಿತು. ಇದನ್ನು ಆಚರಿಸುವ ಸಂಪ್ರದಾಯ 2012ರ ಫೆಬ್ರವರಿ 13ರಿಂದ ಆರಂಭವಾಯಿತು. ಅಂದಿನಿಂದ ಇದು ಅಂತರರಾಷ್ಟ್ರೀಯ ದಿನದ ಸ್ಥಾನಮಾನವನ್ನು ಪಡೆದುಕೊಂಡಿದೆ. ಆದಾಗ್ಯೂ UNESCO ಸದಸ್ಯ ರಾಷ್ಟ್ರಗಳು 2011 ರಲ್ಲಿ ವಿಶ್ವ ರೇಡಿಯೋ ದಿನವನ್ನು ಘೋಷಿಸಿದವು. ಈ ವಿಶೇಷ ದಿನವನ್ನು ಗುರುತಿಸಲು ಪ್ರಪಂಚದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ, ರೇಡಿಯೊದ ಮಹತ್ವ ಮತ್ತು ಇತಿಹಾಸದ ತಿಳಿಸಲು ವಿಚಾರಗೋಷ್ಠಿಗಳು ಮತ್ತು ಚರ್ಚೆಗಳು ನಡೆಯುತ್ತವೆ.

ಪ್ರತಿ ವರ್ಷ ಫೆಬ್ರವರಿ 13, ನಿರ್ದಿಷ್ಟ ವಿಷಯವನ್ನು ಕೇಂದ್ರೀಕರಿಸಿ ಆಚರಣೆ ಮಾಡಲಾಗುವುದು. ಆದ್ದರಿಂದ 2022 ರ, ವಿಶ್ವ ರೇಡಿಯೊ ದಿನದ ಥೀಮ್, “ವಿಕಾಸ- ಪ್ರಪಂಚವು ಯಾವಾಗಲೂ ಬದಲಾಗುತ್ತಿದೆ” ಎಂಬುದಾಗಿದೆ. ಜೊತೆಗೆ ಈ ದಿನದಂದು, ರೇಡಿಯೊದಲ್ಲಿ ಪ್ರಸಾರವಾಗುವ ಆ ಕಾರ್ಯಕ್ರಮಗಳ ಸ್ಥಿರತೆ ಮತ್ತು ನಮ್ಯತೆಯ ಮೇಲೆ ಕೇಂದ್ರೀಕರಿಸಲಾಗುತ್ತದೆ.

2ನೇ ವಿಶ್ವಯುದ್ದದ ಸಮಯದಲ್ಲಿ, ರೇಡಿಯೋ ಮಿಲಿಟರಿ ಮತ್ತು ಸಾರ್ವಜನಿಕರಿಗೆ ಸಂವಹನದ ಪ್ರಮುಖ ಸಾಧನವಾಯಿತು ಎನ್ನಬಹುದು. ಇತ್ತೀಚಿನ ದಿನಗಳಲ್ಲಿ, ಸುದ್ದಿ, ಹಾಡುಗಳು ಮತ್ತು ಕ್ರೀಡಾ ಮಾಹಿತಿಯನ್ನು ಕೇಳಲು ಈ ಮಾಧ್ಯಮವನ್ನು ಬಳಸಲಾಗುತ್ತದೆ.

ಫೆಬ್ರವರಿ 13 ರಂದು ವಿಶ್ವ ರೇಡಿಯೋ ದಿನವನ್ನು ಆಚರಿಸಲಾಗುತ್ತದೆ
ರೇಡಿಯೋ

ರೇಡಿಯೋ ಜನರಿಗೆ ಶಿಕ್ಷಣ, ಕೃಷಿ ಮತ್ತಿತರ ಕ್ಷೇತ್ರಗಳ ಮಾಹಿತಿ ಮತ್ತು ಸುದ್ದಿಗಳನ್ನು ಒದಗಿಸುವ ಮಾಧ್ಯಮವಾಗಿದೆ ಮಾತ್ರವಲ್ಲದೆ, ಅವರು ತಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಪಡಿಸಲು ಒಂದು ವೇದಿಕೆಯೂ ಆಗಿದೆ. ಇಟಲಿಯ ಮಾರ್ಕೊನಿ ರೇಡಿಯೋದ ಪಿತಾಮಹ. ಆರಂಭದಲ್ಲಿ ರೇಡಿಯೋವನ್ನು ವೈರ್‌ಲೆಸ್‌ ಟೆಲಿಗ್ರಾಫ್ ಎಂದು ಕರೆಯಲಾಗುತ್ತಿತ್ತು.

“ರೇಡಿಯೋ ಮತ್ತು ವೈವಿಧ್ಯ’ ಎಂಬ ಥೀಮ್‌ ಇರಿಸಿಕೊಂಡು ಈ ಬಾರಿ ವಿಶ್ವ ರೇಡಿಯೋ ದಿನವನ್ನು ಆಚರಿಸಲಾಗುತ್ತಿದೆ. ನ್ಯೂಸ್‌ ರೂಮ್‌ ಮತ್ತು ಏರ್‌ ವೇಯಲ್ಲಿ ವೈವಿಧ್ಯ ಕಾಪಾಡಿಕೊಳ್ಳುವುದು ಮತ್ತು ಕೇಳುಗರ ಸದಭಿರುಚಿಗೆ ಅನುಗುಣವಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸುವುದು, ಸಮುದಾಯಗಳ ಕಾರ್ಯಕ್ರಮದಲ್ಲಿ ವೈವಿಧ್ಯವನ್ನು ತರುವುದು ಆಚರಣೆಯ ಉದ್ದೇಶ. ವಿಶ್ವ ಸಂಸ್ಥೆಯ ಪ್ರಕಾರ ಜಗತ್ತಿನಾದ್ಯಂತ 44 ಸಹಸ್ರ ರೇಡಿಯೋ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಟಿವಿ ಅಥವಾ ದೂರದರ್ಶನದ ಆವಿಷ್ಕಾರದ ಮೊದಲು, ರೇಡಿಯೋ ಪ್ರಪಂಚದಾದ್ಯಂತ ಹೆಚ್ಚಿನ ಜನರ ಕೇಂದ್ರ ಆಕರ್ಷಣೆಯಾಗಿತ್ತು. ಇದು ಪಟ್ಟಣದಿಂದ ಹಳ್ಳಿಗಳವರೆಗೆ, ದೇಶದಿಂದ ಜಾಗತಿಕ ಮಟ್ಟಕ್ಕೆ ಸಂಪರ್ಕವನ್ನು ಮಾಡುವಂತಹ ಸಾಧನವಾಗಿದೆ. ಇದು ಜನರಿಗೆ ಪ್ರಸ್ತುತ ಸನ್ನಿವೇಶಗಳು, ಸುದ್ದಿಗಳು, ಕಥೆಗಳು, ಹಾಡುಗಳು ಮತ್ತು ಇತರ ಮನರಂಜನೆಯ ವಿಷಯಗಳು, ಶೈಕ್ಷಣಿಕ ಕಾರ್ಯಕ್ರಮಗಳು, ವೈದ್ಯಕೀಯ ಅರಿವು ಮತ್ತು ಎಲ್ಲವನ್ನೂ ಒದಗಿಸುತ್ತದೆ. ಇಷ್ಟು ಪ್ರಾಮುಖ್ಯತೆ ಪಡೆದಿರುವ ರೇಡಿಯೋ ಸದ್ಯ ತೆರೆಮರೆಗೆ ಸೇರುತ್ತಿದೆ ಎನ್ನುವುದು ದುರಾದೃಷ್ಟಕರ. ಇದರ ಬಳಕೆ ಕಡಿಮೆಯಾಗುತ್ತಿದ್ದರೂ, ಮಹತ್ವ ಇನ್ನೂ ಹಾಗೆಯೇ ಇದೆ. ಇದನ್ನು ಮತ್ತಷ್ಟು ಹೆಚ್ಚಿಸುವ ಹಾಗೂ ರೇಡಿಯೋದ ಪ್ರಾಮುಖ್ಯತೆಯನ್ನು ಮುಂದಿನ ಪೀಳಿಗೆಗೂ ಸಾರುವ ಉದ್ದೇಶದಿಂದ ಈ ದಿನವನ್ನು ಆಚರಣೆ ಮಾಡಲಾಗುತ್ತಿದೆ.

ಇತಿಹಾಸವನ್ನು ಕೆದಕಿದರೆ, ರೇಡಿಯೋ 19 ನೇ ಶತಮಾನದ ಮಧ್ಯಭಾಗದಲ್ಲಿ ಆರಂಭವಾಗಿದೆ. ಇದು ನಿರ್ದಿಷ್ಟ ಬ್ಯಾಂಡ್‌ವಿಡ್ತ್‌ಗೆ ಸಂದೇಶಗಳನ್ನು ರವಾನಿಸುವ ಧ್ವನಿ ತರಂಗಗಳು ಮತ್ತು ಸಂಕೇತಗಳ ಸಹಾಯದಿಂದ ಕಾರ್ಯನಿರ್ವಹಿಸುತ್ತದೆ. ಭಾರತದಲ್ಲಿ, ರೇಡಿಯೋ 20 ನೇ ಶತಮಾನದ ಆರಂಭದಲ್ಲಿ ಪರಿಚಯವಾಗಿತ್ತು, ಆದರೂ, ಇದು ಸಮೂಹ ಮಾಧ್ಯಮದ ಜನಪ್ರಿಯ ಮಾಧ್ಯಮವಾಗಲು ಹಲವಾರು ವರ್ಷಗಳನ್ನು ತೆಗೆದುಕೊಂಡಿದ್ದು ಮಾತ್ರ ಸತ್ಯ.

ಫೆಬ್ರವರಿ 13 ರಂದು ವಿಶ್ವ ರೇಡಿಯೋ ದಿನವನ್ನು ಆಚರಿಸಲಾಗುತ್ತದೆ
ರೇಡಿಯೋ ಸ್ಟೇಷನ್ ನಲ್ಲಿ
ಕೆಲಸ ಮಾಡುವ ಸಿಬ್ಬಂಧಿ ಚಿತ್ರ

ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ ಕೇಳಿಸಿಕೊಳ್ಳುವ ಮಾಧ್ಯಮದ ಇಂದಿನ ಮಹತ್ವವನ್ನು ಜನರು ಅರಿತುಕೊಳ್ಳುವುದು. ದೂರದರ್ಶನದ ಜನಪ್ರಿಯತೆಯ ವರ್ಷಗಳ ನಂತರವೂ, ರೇಡಿಯೋವು ಸಂಗೀತದ ಮಾಧ್ಯಮವಾಗಿದೆ, ಪ್ರಯಾಣದ ಒಡನಾಡಿಯಾಗಿದೆ ಮತ್ತು ಸಮುದಾಯ ರೇಡಿಯೋ ಮೂಲಕ ಸಮುದಾಯದ ಧ್ವನಿಯನ್ನು ಹೆಚ್ಚಿಸುವ ರೂಪದಲ್ಲಿ ವಿಶ್ವದಲ್ಲಿ ಪ್ರತಿಷ್ಠಿತ ಸ್ಥಾನವನ್ನು ಹೊಂದಿದೆ ಎಂದರೆ ತಪ್ಪಾಗಲಾರದು.

ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಡುತ್ತಿರುವ ನಕಲಿ ಸುದ್ದಿಗಳಿಂದ ತುಂಬಿರುವ ಜಗತ್ತಿನಲ್ಲಿ, ರೇಡಿಯೋ ಇನ್ನೂ ನಂಬಲರ್ಹ ಸುದ್ದಿ ಮೂಲವಾಗಿ ಜನರನ್ನು ತಲುಪುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. COVID-19 ಸಾಂಕ್ರಾಮಿಕ ಸಮಯದಲ್ಲಿ, ರೇಡಿಯೋ ದ್ವೇಷ ಅಥವಾ ತಾರತಮ್ಯವನ್ನು ಸುದ್ದಿಗಳನ್ನು ಪ್ರಚೋದಿಸದೆ ಮಾಹಿತಿಯ ವಿಶ್ವಾಸಾರ್ಹ ಮೂಲವಾಗಿದೆ ಎಂದು ಸಾಬೀತಾಗಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಸಾಕು ಪ್ರಾಣಿಗಳಿಗೂ ವಿಮೆ

ಸಾಕು ಪ್ರಾಣಿಗಳಿಗೂ ವಿಮೆ ಅಗತ್ಯವಿದೆ

ರಾತ್ರಿ ತಡವಾಗಿ ಪ್ರವಾಸಗಳನ್ನು ಅನುಭವಿಸಬಹುದಾದ ಕೆಲವೊಂದು ನಗರಗಳು

ಭಾರತದ ರಾತ್ರಿ ತಡವಾಗಿ ಪ್ರವಾಸಗಳನ್ನು ಅನುಭವಿಸಬಹುದಾದ ಕೆಲವೊಂದು ನಗರಗಳು