ಭತ್ತದ ಪದವು ಸಸ್ಯಕ್ಕೂ ಹಾಗೂ ಸಸ್ಯದ ಕಾಳಿಗೂ ಅನ್ವಯಿಸುತ್ತದೆ. ಭತ್ತಕ್ಕೆ ಕನ್ನಡದಲ್ಲಿ ನೆಲ್ಲು ಎಂದು ಸಹ ಇಂಗ್ಲೀಶ್‌ನಲ್ಲಿ ಪ್ಯಾಡಿ ಬಳಕೆಯಲ್ಲಿದ್ದಾಗ್ಯೂ ರೈಸ್ ಎನ್ನುವ ಪದವನ್ನು ಭತ್ತ (ಕೆಲವೊಮ್ಮೆ ಅನ್‌ಮಿಲ್ಡ್ ರೈಸ್), ಅಕ್ಕಿ ಹಾಗೂ ಅನ್ನಕ್ಕೂ ಬಳಸಲಾಗುತ್ತದೆ. ಏಷಿಯಾದ ಭತ್ತದ ವೈಜ್ಞಾನಿಕ ಹೆಸರು ಒರಿಜ ಸಟಿವ ಮತ್ತು ಆಫ್ರಿಕಾದ ಬತ್ತದ ವೈಜ್ಞಾನಿಕ ಹೆಸರು ಒರಿಜ ಗ್ಲಾಬಿರ್ರಿಮ. ಭತ್ತವು ವಿಶೇಷವಾಗಿ ಏಷಿಯಾದಲ್ಲಿ ಅತಿಹೆಚ್ಚು ಮಾನವನ ಆಹಾರವಾಗಿರುವ ಧಾನ್ಯ. ಜಾಗತಿಕ ಉತ್ಪಾದನೆಯಲ್ಲಿ ಇದರ ಸ್ಥಾನ ಕಬ್ಬು ಮತ್ತು ಮೆಕ್ಕೆಜೋಳದ ನಂತರ ಮೂರನೆಯದು (೨೦೧೪ ವರುಷ) ಧಾನ್ಯಗಳ ಉತ್ಪಾದನೆಯಲ್ಲಿ ಅದರ ಸ್ಥಾನ ಮೆಕ್ಕೆಜೋಳದ ನಂತರ ಎರಡನೆಯದು. ಮೆಕ್ಕೆಜೋಳದ ದೊಡ್ಡ ಭಾಗವು ಮಾನವನ ಆಹಾರವಾಗಿಯಲ್ಲದೆ ಬೇರೆ ಕೆಲಸಗಳಿಗೆ ಬೆಳೆಯುವುದರಿಂದ ಮಾನವ ಆಹಾರವಾಗಿ ಬತ್ತ (ಅಕ್ಕಿಯ ರೂಪದಲ್ಲಿ) ಪ್ರಮುಖ ಪಾತ್ರವಹಿಸುತ್ತದೆ ಮತ್ತು ಮಾನವನ ಕ್ಯಾಲರಿ ಅಗತ್ಯದ ಒಂದರಲ್ಲಿ ಐದು ಭಾಗವನ್ನು ಪೂರೈಸುತ್ತದೆ.
ಭಾರತದಲ್ಲಿ ಭತ್ತಕ್ಕೆ ಏಕದಳ ಧಾನ್ಯಗಳಲ್ಲಿ ಮೊದಲ ಸ್ಥಾನವಿದೆ. ಇದು ಪೂರ್ವ ಹಾಗೂ ದಕ್ಷಿಣ ಭಾರತದ ಪ್ರಮುಖ ಆಹಾರ. ಜಾಗತಿಕ ಉತ್ಪಾದನೆಯಲ್ಲಿ ಭಾರತದ ಸ್ಥಾನ ಚೀನಾದ ನಂತರ ಎರಡನೆಯದು. ೨೦೧೪ ನೆಯ ವರುಷದಲ್ಲಿ ಭತ್ತವನ್ನು ಭಾರತದ ೪೩.೪೦ ದಶಲಕ್ಷ ಹೆಕ್ಟೇರುಗಳಲ್ಲಿ ಬೆಳಯಲಾಗಿತ್ತು ಮತ್ತು ಉತ್ಪಾದನೆ ೧೫೭.೨೦ ದಶಲಕ್ಷ ಟನ್ನುಗಳಿತ್ತು. ಭತ್ತದ ಉತ್ಪಾದನೆಯು ಕರ್ನಾಟಕದಲ್ಲಿ ಬತ್ತವನ್ನು ೧.೪೯ ದಶಲಕ್ಷ ಹೆಕ್ಚೇರುಗಳಲ್ಲಿ ಬೆಳೆಯಲಾಗುತ್ತದೆ ಮತ್ತು ಉತ್ಪಾದನೆ ೩.೬೯ ದಶಲಕ್ಷ ಟನ್ನು ಇದೆ (ಮಾಹಿತಿಯ ವರುಷ ೨೦೦೯-೧೦). ಬತ್ತಕ್ಕೆ ಹೆಚ್ಚಿನ ತಾಪಮಾನ ೨೦° ಸೆಲ್‌ಸಿಯಸ್ ಅಗತ್ಯ ಆದರೆ ತಾಪಮಾನ ೩೫° ರಿಂದ ೪೦° ಸೆಲಿಯಸ್ ದಾಟಬಾರದು. ಬಿತ್ತನೆಯ ಸಮಯದಲ್ಲಿ ೨೦° ದಿಂದ ೨೨° ಸೆ., ಬೆಳವಣಿಗೆಯ ಸಮಯದಲ್ಲಿ ೨೩° ದಿಂದ ೨೫° ಸೆ. ಮತ್ತು ಕೊಯ್ಲಿನ ಸಮಯದಲ್ಲಿ ೨೫° ದಿಂದ ೩೦° ಸೆ. ತಾಪಮಾನಗಳು ಅತ್ಯುತ್ತಮ. ಇದನ್ನು ಸಮುದ್ರ ಮಟ್ಟದಿಂದ ೨೦೦೦ ಮೀ. ಎತ್ತರದವರೆಗೂ ಬೆಳೆಯಬಹುದು. ೧೦೦ ಸೆಂ.ಮೀ. ಕಡಿಮೆ ಮಳೆಯಿರುವ ಪ್ರದೇಶಗಳಲ್ಲಿ ನೀರಾವರಿಯೊಂದಿಗೆ ಬೆಳೆಯಬಹುದು.
ಸಾಮಾನ್ಯವಾಗಿ ಏಶಿಯಾ ಬತ್ತ ಎಂದು ಕರೆಯಲಾಗುವ ಒರಿಜ ಸಟಿವ ಸಸ್ಯ.
ಎರಡು ಪ್ರಮುಖ ಪ್ರಭೇದಗಳು ಏಷಿಯಾದ ಬತ್ತ , ಒರಿಜ ಸಟಿವ ಮತ್ತು ಆಫ್ರಿಕಾದ ಬತ್ತ ಒರಿಜ ಗ್ಲಾಬಿರ್ರಿಮ.
ಎರಡನ್ನು ಬೇರೆ ಬೇರೆಯಾಗಿ ಬೆಳೆಯಾಗಿ ಪಳಗಿಸಲಾಯಿತು. ಒಂದು ಅಧ್ಯಯನವು ಇಂದಿನಿಂದ ೮,೦೦೦ ವರುಷಗಳಷ್ಟು ಹಿಂದೆ ಒರಿಜ ಸಟಿವ ಉಪಪ್ರಭೇದ ಜಪೋನಿಕ ದಕ್ಷಿಣ ಚೀನಾದ ಯಾಂಗ್ಟ್‌ಜಿ ನದಿವೆಯ ಕಣಿವೆಯಲ್ಲಿ ಪಳಗಿಸಲಾಯಿತು ಎಂದು ಅನುವಂಶಿಕ ಹಾಗೂ ಪ್ರಾಚ್ಯಶಾಸ್ತ್ರ ಆಕರಗಳು ದೃಡೀಕರಿಸುತ್ತವೆ ಎನ್ನುತ್ತದೆ. ಇದರ ಪ್ರಕಾರ ಇಂಡಿಕ ಉಪಪ್ರಭೇದವು ನಂತರದಲ್ಲಿ ಉಪಯುಕ್ತ ಗುಣಗಳ ಆಯ್ಕೆಯ ಮೂಲಕ ರೂಪಿಗೊಂಡಿರುವ ಸಾದ್ಯತೆ ಇದೆ. ೨೦೧೨ರ ಅಧ್ಯಯನವೊಂದು ಯಾಂಗ್ಟಜಿ ನದಿಯ ಕಣಿವೆಯಲ್ಲದೆ ಬತ್ತವನ್ನು ಅನುವಂಶಿಕತೆಯ ಪುರಾವೆಗಳ ಆಧಾರದ ಮೇಲೆ ಪರ್ಲ್ ನದಿ ಕಣಿವೆಯಲ್ಲಿ ಪಳಗಿಸಲಾಯಿತು ಮತ್ತು ಪೂರ್ವ ಏಶಿಯಾದಿಂದ ಅದು ದಕ್ಷಿಣ ಮತ್ತು ಆಗ್ನೇಯ ಏಶಿಯಾಕ್ಕೆ ಹರಡಿತು ಎನ್ನುತ್ತದೆ. ಈ ಬಗೆಗೆ ವಿದ್ವಾಂಸರಲ್ಲಿ ಅಭಿಪ್ರಾಯ ಬೇಧ ಕಂಡುಬರುತ್ತದೆ.
ಇನ್ನೊಂದು ಅಧ್ಯಯನವು ಜಪೋನಿಕ ಉಪಪ್ರಭೇದಕ್ಕೆ ದಕ್ಷಿಣ ಚೀನಾದ ಯಾಗ್ಜಿ ಕಣಿವೆಯು ವಂಶವಾಹಿ ಸಂಚಯಕ್ಕೆ (ಜೀನ್ ಪೂಲ್) ಮೂಲ ಪ್ರದೇಶ ಎಂದು ಒಪ್ಪಿಕೊಳ್ಳುತ್ತದೆ. ಆದರೆ ಇಂಡಿಕಾ ಉಪಪ್ರಭೇದದ ವಂಶವಾಹಿ ಸಂಚಯಕ್ಕೆ ಇಂಡೋಚೀನಾ ಮತ್ತು ಬ್ರಹ್ಮಪುತ್ರ ನದಿಯ ಪ್ರದೇಶವು ಮೂಲ ಪ್ರದೇಶ ಎಂದು ಅಭಿಪ್ರಾಯಪಡುತ್ತದೆ. ಅಷ್ಟೇ ಅಲ್ಲ ಇಂಡಿಕಾದ ಇನ್ನೊಂದು ಕುಲ ಆಸ್‌ನ ಮೂಲವು ಕೇಂದ್ರ ಭಾರತ ಅಥವಾ ಬಾಂಗ್ಲಾದೇಶ ಆಗಿರುವ ಸಾಧ್ಯತೆ ಇದೆ ಎಂದು ಭಾವಿಸುತ್ತದೆ. ಭಾರತದ ಗಂಗಾ ಬಯಲು ಪ್ರದೇಶ ಮತ್ತು ಚೀನಾದ ಯಾಗ್ಟ್‌ಜೆ ಕಣಿವೆ ಪ್ರದೇಶಗಳೆರಡರ ಪ್ರಾಚ್ಯಶಾಸ್ತ್ರ ಬತ್ತದ ಇರುವಿಕೆಯ ಬಗೆಗಿನ ದಾಖಲೆ ಸುಮಾರು ಇಂದಿನಿಂದ ೯,೦೦೦-೧೦,೦೦೦ ವರುಷಗಳಷ್ಟು ಹಿಂದೆ ಹೋಗುತ್ತದೆ ಎನ್ನುವ ಇದು ಜಪೋನಿಕ ಮತ್ತು ಇಂಡಿಕಾ ಉಪಪ್ರಭೇದಗಳು ೨೦೦,೦೦೦ ದಿಂದ ೪೪೦,೦೦೦ ವರುಷಗಳಷ್ಟು ಹಿಂದೆಯೇ ಕವಲೊಡೆದವು ಎಂದು ಅಭಿಪ್ರಾಯಪಡುತ್ತದೆ. ಇದು ಹಿಂದಿನ ಅಧ್ಯಯನ ಜಪೋನಿಕ ಮತ್ತು ಇಂಡಿಕಾ ಉಪಪ್ರಭೇದಗಳು ಕವಲೊಡೆದು ಸುಮಾರು ೧೦೦,೦೦೦ ವರುಷವಾಯಿತು ಎಂಬ ನಿಲುವಿಗೆ ತಿದ್ದುಪಡಿ ಮಾಡುತ್ತದೆ.
ಇತ್ತೀಚಿನ ಆರ್ಕಿಯಾಲಜಿ ಪುರಾವೆಗಳ ವಿಶ್ಲೇಷಣೆಯು ಕ್ರಿ ಪೂ ೯೫೦೦ ಸುಮಾರಿಗೆ ಚೀನಾದ ಹುಬೇಯಿ ಪ್ರಾಂತದ ಹಳ್ಳಿಯೊಂದರ ಹತ್ತಿರದಲ್ಲಿದ್ದ ಬೇಟೆಗಾರ ಮತ್ತು ಆಹಾರ ಸಂಗ್ರಹಿಸುವ ಸಮುದಾಯವು ವಾರ್ಷಿಕ ಸ್ವರೂಪದ ಕಾಡುಸಸ್ಯ ಬತ್ತದ ಗಿಡಗಳನ್ನು ಆಯ್ದು ಅದರ ಬೀಜಗಳನ್ನು ಬಿತ್ತನೆಯಾಗಿ ಎರಚುತ್ತಿದ್ದರು ಎನ್ನುತ್ತದೆ. ಕಾಡುಸಸ್ಯದ ಬೀಜಗಳು (ಒರಿಜ ರುಫಿಪೊಜನ್) ಒಂದು ತಿಂಗಳವರೆಗೂ ಮೊಳಕೆ ಬರುತ್ತವೆ. ಆದರೆ ಹೀಗೆ ಎರಚಿದ ಬೀಜಗಳು ಕಾಡುಸಸ್ಯಗಳಂತಲ್ಲದೆ ಒಮ್ಮೆಲೇ ಮೊಳೆಯುತ್ತಿದ್ದವು. ಇದು ಬೆಳೆದ ಧಾನ್ಯಗಳನ್ನು ಒಮ್ಮೆಲೆ ಕೊಯ್ಲು ಮಾಡಲು ಅವಕಾಶ ಮಾಡಿಕೊಡುತಿತ್ತು. ನಂತರದ ಮೂರು ಸಾವಿರ ವರುಷದ ಪುರಾವೆಗಳು ಕಾಡುಸಸ್ಯ ಹಾಗೂ ಬೆಳೆದ ತಳಿಗಳ ಅಕ್ಕಿಯನ್ನು ಬಳಸಿದ ಸೂಚನೆ ನೀಡುತ್ತವೆ. ಸದ್ಯದ ಆರ್ಕಿಯಾಲಜಿ ಆಫ್ ಇಂಡಿಯಾದ ಡೈರೆಕ್ಟರ್ ಜೆನರಲ್ (ಜೂಲೈ ೨೦೧೬ರಂತೆ) ಶ್ರೀ ರಾಕೇಶ್ ತಿವಾರಿಯವರೊಂದಿಗಿನ ಇಂಗ್ಲೀಶ್ ಪಾಕ್ಷಿಕ ಪ್ರಂಟ್‌ಲೈನ್‌ನ ಸಂದರ್ಶನವು ಉತ್ತರ ಪ್ರದೇಶದ ಲಹುರದೇವ ಎನ್ನುವ ಸ್ಥಳದಲ್ಲಿ ಸುಟ್ಟು ಕರಕಲಾದ ಅಕ್ಕಿಯ ಕಾಳುಗಳನ್ನು ಪತ್ತೆ ಹಚ್ಚಿದ್ದು ಇದರ ಕಾಲಮಾನ ಕಾರ್ಬನ್ ಕಾಲಗಣನಾ ಪದ್ಧತಿ ಪ್ರಕಾರ ಕ್ರಿ ಪೂ ಏಳನೆಯ ಸಹಸ್ರಮಾನ ಎನ್ನುತ್ತದೆ. ಈ ಧಾನ್ಯಗಳು ಕಾಡುಸಸ್ಯದ ಮತ್ತು ಪಳಗಿಸಿದ ಸಸ್ಯದ ಧಾನ್ಯಗಳು ಎನ್ನುತ್ತದೆ ಸಂದರ್ಶನ. ಸಿಂಧೂ ನಾಗರೀಕತೆಯಲ್ಲಿ ಬತ್ತದ ಪಳಗಿಸುವಿಕೆಯ ಬಗೆಗಿನ ಮಾಹಿತಿಗಳು ಸ್ಪಷ್ಟವಿಲ್ಲ. ಸಿಂಧೂ ನಾಗರೀಕತೆಯ ಕೇಂದ್ರದಲ್ಲಿ ಬತ್ತ ಬೆಳೆಯುವ ಮಾಹಿತಿ ಇಲ್ಲ ಆದರೆ ಲೋಥಲ್ ಮತ್ತು ರಂಗಪುರಗಳಲ್ಲಿ ಬತ್ತದ ಹೊಟ್ಟಿನ ಬಗೆಗೆ ಮಾಹಿತಿ ಇದೆ.
ಆಫ್ರಿಕಾದ ಬತ್ತ
ಆಫ್ರಿಕಾ ಬತ್ತದ ವೈಜ್ಞಾನಿಕ ಹೆಸರು ಒರಿಜ ಗ್ಲಾಬಿರ್ರಿಮ ಮತ್ತು ಇದನ್ನು ಆಫಿಕ್ರಾದಲ್ಲಿನ ಕಾಡುಸಸ್ಯವಾದ ಒರಿಜ ಬಾರ್ಥಿಯಿಂದ ಪಡೆಯಲಾಗಿದೆ. ಇದರ ಪಳಗಿಸುವಿಕೆ ಈಗ ಮಾಲಿಯಲ್ಲಿರುವ ಮೇಲಿನ ನೈಜರ್ ನದಿಯ ಪ್ರದೇಶದಲ್ಲಿ ಸುಮಾರು ೨೦೦೦ ದಿಂದ ೩೦೦೦ ವರುಷಗಳ ಹಿಂದೆ ಪಳಗಿಸಲಾಯಿತು.
ಭತ್ತ ಬೇಸಾಯದ ಪರಿಸರ ವ್ಯವಸ್ಥೆಗಳು
ಪರಿಸರ ವ್ಯವಸ್ಥೆಯು ಬೆಳೆ ಬೆಳೆಯುವ ಒಟ್ಟಾರೆ ಪರಿಸರ ಎಂದು ವ್ಯಾಖ್ಯಾನಿಸ ಬಹುದು. ಅಂತರರಾಷ್ಟ್ರೀಯ ಬತ್ತ ಸಂಶೋಧನಾ ಸಂಸ್ಥೆ (ಇಂಟರ್ನಾಶನಲ್ ರೈಸ್ ರಿಸರ್ಚ್ ಇನ್‌ಸ್ಟಿಟ್ಯೂಟ್-ಐಆರ್‌ಆರ್‌ಐ) ೧೯೮೪ರಲ್ಲಿ ಬೆಳೆಯ ಕಾಲಮಾನ ಮತ್ತು ನೀರಿನ ವ್ಯವಸ್ಥೆ, ಮಣ್ಣು ಮತ್ತು ಭೂಲಕ್ಷಣಗಳ ಆಧಾರದ ಮೇಲೆ ಐದು ವ್ಯವಸ್ಥೆಗಳನ್ನು ಹೆಸರಿಸಿತು.ಅವು
೧. ನೀರಾವರಿ ತಗ್ಗುಭೂಮಿಗಳು,
೨. ಖುಷ್ಕಿ ತಗ್ಗುಭೂಮಿಗಳು,
೩. ಆಳನೀರಿನ ವ್ಯವಸ್ಥೆ
೪. ಎತ್ತರದ ಭೂಮಿಗಳು ಮತ್ತು
೫. ಉಬ್ಬರವಿಳಿತದ ಗದ್ದೆಗಳು.
ಬತ್ತ ಬೆಳೆಯುವ ಪ್ರದೇಶವು ಶೇ ೫೩ರಷ್ಟು ಪ್ರದೇಶವು ನೀರಾವರಿಗೂ, ಶೇ ೨೬ರಷ್ಟು ಪ್ರದೇಶವು ಖುಷ್ಕಿ ತಗ್ಗುಭೂಮಿಗಳಿಗೂ, ಶೇ ೧೩ರಷ್ಟು ಪ್ರದೇಶವು ಎತ್ತರದ ಭೂಮಿಗಳಿಗೂ ಮತ್ತು ಶೇ ೮ರಷ್ಟು ಪ್ರದೇಶವು ನೆರೆ ಹಾವಳಿ ಪ್ರದೇಶಗಳಿಗೂ (ಇದನ್ನು ಬಹುತೇಕ ಆಳನೀರು ವ್ಯವಸ್ಥೆಗೆ ಬದಲಿಯಾಗಿ ಬಳಸಬಹುದು) ಹರಡಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ ಈ ಒಟ್ಟು ಬತ್ತದ ಉತ್ಪಾದನೆಯಲ್ಲಿ ಈ ಪ್ರದೇಶಗಳಿಂದ ಬರುವ ಉತ್ಪಾದನೆಯ ಅಂದಾಜುಗಳು ಅನುಕ್ರಮಾಗಿ ಶೇ ೭೩, ೧೭, ೪ ಮತ್ತು ೬ ಇವೆ. ಖುಷ್ಕಿ ತಗ್ಗುಭೂಮಿ ಪ್ರದೇಶಗಳು ಪ್ರಮುಖವಾಗಿ ಭಾರತ (ಮುಖ್ಯವಾಗಿ ಈಶಾನ್ಯ ಭಾರತ ಮತ್ತು ಪಶ್ಚಿಮದ ಕರಾವಳಿ ಪ್ರದೇಶಗಳನ್ನು ಒಳಗೊಂಡಿದೆ), ಬಾಂಗ್ಲಾದೇಶ, ಇಂಡೊನೇಶಿಯ, ಲಾವೊಸ್, ಪಿಲಿಪೈನ್ಸ್ ಮತ್ತು ಥೈಲ್ಯಾಂಡ್‌ಗಳನ್ನು ಒಳಗೊಂಡಿದೆ. ಇಲ್ಲಿಯ ಪ್ರಮುಖ ಅಂಶ ನೀರಿನ ಕೊರತೆಯಾಗಿದೆ. ಎತ್ತರಭೂಮಿಗಳ ಬತ್ತದ ಪರಿಸರ ವ್ಯವಸ್ಥೆ ಶೇ ೬೦ರಷ್ಟು ಪ್ರದೇಶ ಏಶಿಯಾದಲ್ಲಿಯೂ, ಶೇ ೩೦ ಲ್ಯಾಟಿನ್ ಅಮೆರಿಕಾದಲ್ಲಿಯೂ ಮತ್ತು ಶೇ ೧೦ ಆಫ್ರಿಕಾಕ್ಕೂ ಹಬ್ಬಿದೆ.
ಆಳನೀರಿನ ವ್ಯವಸ್ಥೆಯ ಬತ್ತ ಬೆಳೆಯುವಿಕೆಯು ದಕ್ಷಿಣ ಏಶಿಯಾದಲ್ಲಿ ಭಾರತ ಮತ್ತು ಬಾಂಗ್ಲಾದೇಶಗಳ ಗಂಗಾ ಮತ್ತು ಬ್ರಹ್ಮಪುತ್ರಾ ನದಿಗಳ ಜಲಾನಯನ ಪ್ರದೇಶಗಳಲ್ಲಿ ಪ್ರಮುಖವಾಗಿದೆ. ಆಗ್ನೇಯ ಏಶಿಯಾದಲ್ಲಿನ ಮಯನ್ಮಾರ್, ಥೈಲ್ಯಾಂಡ್, ವಿಯೆಟ್ನಾಂ ಮತ್ತು ಕಾಂಬೋಡಿಯಾಗಳಲ್ಲಿಯೂ ಈ ವ್ಯವಸ್ಥೆ ಕೆಲವು ಪ್ರದೇಶಗಳಲ್ಲಿ ಪ್ರಮುಖವಾಗಿದೆ. ಆಳನೀರಿನ ಬತ್ತವು ೫೦ ಸೆಂಮೀಗೂ (೨೦ ಇಂಚು) ಹೆಚ್ಚು ನೀರು ಕನಿಷ್ಠ ಒಂದು ತಿಂಗಳು ಇರುವ ನೆರೆ ಸ್ಥಿತಿಯ ಬತ್ತ. ಬತ್ತವು ಈ ಸ್ಥಿತಿಗೆ ಎರಡು ರೀತಿಯ ಹೊಂದಾಣಿಕೆ ತೋರಿದೆ. ಒಂದು ಸಂಪ್ರದಾಯಿಕ ಎತ್ತರದ ತಳಿಗಳು. ಈ ತಳಿಗಳು ಎತ್ತರವಾಗಿರುವುದು ಅಲ್ಲದೆ ಉದ್ದನೆಯ ಎಲೆಗಳನ್ನು ಹೊಂದಿವೆ. ಎರಡನೆಯದು ತೇಲುವ ಬತ್ತ. ಈ ಬತ್ತವು ನೀರನಲ್ಲಿದ್ದಾಗ ದಿನಕ್ಕೆ ೨೫ ಸೆಂಮೀ (೯.೮ ಇಂಚು) ಬೆಳೆಯಬಲ್ಲದು. ಇದು ೭ ಮೀಟರಿನಷ್ಟು ಎತ್ತರ ಬೆಳೆಯಬಲ್ಲದು ಮತ್ತು ೪ ಮೀ (೧೩ ಅಡಿಗಳು) ಎತ್ತರ ನೀರಿನಲ್ಲಿಯೂ ಬದುಕಬಲ್ಲದು.
ಭಾರತದಲ್ಲಿ ಬತ್ತ ಬೆಳೆಯುವ ಪ್ರದೇಶಗಳು
ಈಶಾನ್ಯ ಭಾರತದ ಪ್ರದೇಶಗಳು- ಇದು ಅಸ್ಸಾಂ ಮತ್ತು ಇತರ ಈಶಾನ್ಯ ಭಾರತದ ರಾಜ್ಯಗಳನ್ನು ಒಳಗೊಂಡಿದೆ. ಅಸ್ಸಾಂನಲ್ಲಿ ಬತ್ತವನ್ನು ಬ್ರಹ್ಮಪುತ್ರ ನದಿಯ ಜಲಾನಯನ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಈ ಪ್ರದೇಶವು ಹೆಚ್ಚಿನ ಮಳೆಯ ಪ್ರದೇಶವಾಗಿದ್ದು ನೀರಾವರಿಯಲ್ಲಿ ಬತ್ತವನ್ನು ಬೆಳೆಯಲಾಗುತ್ತದೆ.
ಪೂರ್ವ ಪ್ರದೇಶ-ಇದು ಬಿಹಾರ, ಚತ್ತೀಸ್‌ಘಢ, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ಪೂರ್ವ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಗಳನ್ನು ಒಳಗೊಂಡ ಈ ಪ್ರದೇಶವು ಗಂಗಾ ಮತ್ತು ಮಹಾನದಿಗಳ ಜಲಾನಯನ ಪ್ರದೇಶ. ಇಲ್ಲಿ ಬತ್ತವನ್ನು ಬಹುತೇಕ ಮಳೆಯಾಧಾರಿತವಾಗಿ ಬೆಳೆಯಲಾಗುತ್ತದೆ.
ಉತ್ತರದ ಪ್ರದೇಶ- ಇದು ಹರಿಯಾಣ, ಪಂಜಾಬ್, ಪಶ್ಚಿಮ ಉತ್ತರ ಪ್ರದೇಶ, ಉತ್ತರಕಾಂಡ, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರಗಳನ್ನು ಒಳಗೊಂಡಿದೆ. ಇಲ್ಲಿ ಚಳಿಗಾಲದಲ್ಲಿ ಕಡಿಮೆ ತಾಪಮಾನ ಇರುತ್ತದೆ. ಹೀಗಾಗಿ ಇಲ್ಲಿ ಮೇ-ಜೂಲೈನಿಂದ ಸೆಪ್ಟಂಬರ್-ಡಿಸೆಂಬರ್‌ವರೆಗೆ ಒಂದೇ ಬೆಳೆಯನ್ನು ಬೆಳಯಲಾಗುತ್ತದೆ.
ಪಶ್ಚಿಮ ಪ್ರದೇಶ- ಇದು ಗುಜರಾತ್, ಮಹಾರಾಷ್ಟ್ರ ಮತ್ತು ರಾಜಸ್ಥಾನಗಳನ್ನು ಒಳಗೊಂಡಿದ್ದು ಇಲ್ಲಿ ಸಾಮಾನ್ಯವಾಗಿ ಬತ್ತವನ್ನು ಜೂನ್-ಆಗಸ್ಟಿನಿಂದ ಅಕ್ಟೋಬರ್-ಡಿಸೆಂಬರ್‌ವರೆಗೆ ಮಳೆಯಾಧಾರಿತವಾಗಿ ಬೆಳೆಯಲಾಗುತ್ತದೆ.
ದಕ್ಷಿಣದ ಪ್ರದೇಶ- ಈ ಪ್ರದೇಶವು ಆಂಧ್ರಪ್ರದೇಶ, ಕರ್ನಾಟಕ, ಕೇರಳ ಮತ್ತು ತಮಿಳುನಾಡುಗಳನ್ನು ಒಳಗೊಂಡಿದ್ದು ಬತ್ತವನ್ನು ಪ್ರಮುಖವಾಗಿ ಕಾವೇರಿ, ಕೃಷ್ಣ, ಗೋದಾವರಿಯ ಪ್ರಸ್ಥಭೂಮಿಯಲ್ಲಿ ಬೆಳೆಯಲಾಗುತ್ತದೆ.
ಕರ್ನಾಟಕದ ಸಮುದ್ರತಿರದ ಮಾಣಿಕಟ್ಟದ ಒಟ್ಟು ಗಜನಿ ಪ್ರದೇಶವು 48 ಹಸಗಿಯ ರೂಪದಲ್ಲಿದೆ. ಪ್ರತಿ ಹಸಗಿಯು ಕುಟುಂಬದ ವ್ಯಾಪ್ತಿಯಲ್ಲಿ ಹಂಚಿಕೆಯಾಗುತ್ತಿರುತ್ತದೆ. ಪ್ರತಿಯೊಬ್ಬ ಸದಸ್ಯರಿಗೂ ಈ ಆಸ್ತಿಯ ಮೇಲೆ ಸಮಾನವಾದ ಹಕ್ಕು ಇರುತ್ತದೆ. ಗಜನಿಯಲ್ಲಿ ಮುಂಗಾರು ಬೆಳೆಯಾಗಿ ಕಗ್ಗ ಭತ್ತ ಬೆಳೆಯುತ್ತಾರೆ. ಒಂದೆಡೆ ನದಿಗಳು ಸಮುದ್ರ ಸೇರುವ ತವಕದಲ್ಲಿರುತ್ತವೆ, ಮತ್ತೊಂದೆಡೆ ಸಮುದ್ರದ ನೀರಿನ ಆರ್ಭಟ. ಅದಲ್ಲದೆ ಮೇಲ್ಭಾಗದ ತರಿ ಜಮೀನು ಹಾಗೂ ಭಾಗಾಯತ್ ಜಮೀನಿನ ಮಳೆ ನೀರು ಸಹ ಈ ಭಾಗದ ಮೂಲಕವೇ ಹರಿದು ಸಮುದ್ರ ಸೇರುತ್ತಿರುತ್ತದೆ. ಅದರಲ್ಲಿಯೂ ಸಮುದ್ರದ ತಟದ ಗಜನಿ (ಅಚ್ಚುಕಟ್ಟು ಪ್ರದೇಶ) ಗಳಲ್ಲಿ ಬೇಸಾಯ ಮಾಡುವ ಕ್ರಮ ಅತ್ಯಂತ ಕ್ಲಿಷ್ಟಕರ.
ಸಮುದ್ರದ ಭರತ-ಇಳಿತದ ಲೆಕ್ಕಾಚಾರದಲ್ಲಿಯೇ ಇಲ್ಲಿ ಕೃಷಿ ಮಾಡಬೇಕಾಗುತ್ತದೆ. ಮಾಣಿಕಟ್ಟದ ರೈತರು ಒಗ್ಗಟ್ಟಿನಲ್ಲಿ ಸಾಮೂಹಿಕ ಕೃಷಿ ಮಾಡುವ ಮೂಲಕ ಉತ್ತರ ಕೊಟ್ಟಿದ್ದಾರೆ. ಈ ರೀತಿಯ ಕೃಷಿ ಪ್ರದೇಶವು ರಾಜ್ಯದಲ್ಲಿ 6ಸಾವಿರ ಹೆಕ್ಟೇರ್‌ಗೂ ಹೆಚ್ಚಿದ್ದು, ಇದರಲ್ಲಿ 3,500ಹೆಕ್ಟೇರ್ ಕ್ಷೇತ್ರವು ಕುಮಟ ತಾಲ್ಲೂಕಿನ ಅಘನಾಶಿನಿ ನದಿಯ ಹಿನ್ನೀರಿನ ಪ್ರದೇಶದಲ್ಲಿದೆ.
ಬೇಸಾಯದ ಸಮಯ ಬಂದಾಗ ಎಲ್ಲ ರೈತರು ಹಗ್ಗ ಹಿಡಿದು ಭಾಗ ಮಾಡಿಕೊಂಡು ಬಿತ್ತುತ್ತಾರೆ. ಬೆಳೆ ಬಂದಾಗಲೂ ಹಗ್ಗ ಹಿಡಿದು ಕಟಾವು ಮಾಡಲಾಗುತ್ತದೆ. ಬಿತ್ತುವಾಗ ಮತ್ತು ಕಟಾವು ಮಾಡುವಾಗ ಎಲ್ಲ ರೈತರು ಒಟ್ಟಿಗೆ ಭಾಗವಹಿಸಬೇಕು. ಮೃಗಶಿರ ಮಳೆ ಬಿದ್ದನಂತರ ನದಿಯ ಒತ್ತಡ ಹೆಚ್ಚಾದಾಗ ಗಜನಿಯಲ್ಲಿದ್ದ ಉಪ್ಪಿನಾಂಶ ಕೊಚ್ಚಿಹೋಗುತ್ತದೆ. ಗಜನಿಯಲ್ಲಿ ‘0’ ಡಿಗ್ರಿಗಿಂತ ಉಪಿನಾಂಶ ಮತ್ತು ಪಿ.ಎಚ್ 1 ರಿಂದ 2ರಷ್ಟಿದ್ದಾಗ ಕಗ್ಗ ಭತ್ತದ ಬಿತ್ತನೆ ಆರಂಭಗೊಳ್ಳುತ್ತದೆ.
ಕಗ್ಗ ಭತ್ತ ಬೆಳೆಯುವುದೆಂದರೆ ಅದು ಸಾಮೂಹಿಕ ಕೆಲಸ, ಎಲ್ಲರೂ ಒಂದಾದಾಗ ಮಾತ್ರ ಕಗ್ಗ ಬೆಳೆಯಲು ಸಾಧ್ಯ. ಕಗ್ಗವನ್ನು ಮೊಳಕೆ ತರಿಸುವುದು, ಮಣ್ಣಿನ ಹದಕ್ಕೆ ತಕ್ಕಂತೆ ಬಿತ್ತಲು ಮಣ್ಣಿನ ಬಗ್ಗೆ ಮತ್ತು ನೀರಿನ ಉಬ್ಬರ-ಇಳಿತದ ಬಗ್ಗೆ ತಿಳಿವಳಿಕೆ ಇರಬೇಕು. ಬಿತ್ತನೆಯಂತೆ ಭತ್ತದ ಕೊಯ್ಲು ಸಹ ವಿಶಿಷ್ಟವಾದದ್ದು. ಕಟಾವಿನ ಸಮಯದಲ್ಲಿ ಗಜನಿ ಭೂಮಿಯ ಸುತ್ತಲು ನೀರು ಆವರಿಸಿಕೊಂಡಿರುತ್ತದೆ. ಸೊಂಟ ಮಟ್ಟದ ನೀರಿನಲ್ಲಿಯೇ ಕೊಯ್ಲು ಮಾಡಬೇಕಾಗುತ್ತದೆ. ಕೇವಲ ಭತ್ತದ ತೆನೆಗಳನ್ನು ಕೊಯ್ದು ಅದನ್ನು ಸಣ್ಣ ಹೊರೆಗಳಾಗಿ ಕಟ್ಟಿ ದೋಣಿಯ ಮೂಲಕ ಭತ್ತದ ಕಣಗಳಿಗೆ ಒಯ್ಯಲಾಗುತ್ತದೆ. ಕೆಸರು ತುಂಬಿದ ಗದ್ದೆಯಲ್ಲಿ ಕೊಯ್ಲು ಮಾಡುವುದು ಎಷ್ಟು ಕಷ್ಟವೋ, ಅದನ್ನು ಕಣಕ್ಕೆ ಸಾಗಿಸುವುದು ಸಹ ಅಷ್ಟೇ ಕ್ಲಿಷ್ಟಕರ.
ಕಗ್ಗ ಭತ್ತಕೆ ಗೊಬ್ಬರ ಬೇಡ, ಔಷಧಿ ಬೇಡ
ಕಗ್ಗ ಭತ್ತವು ನೆರೆ ಬಂದರೂ ಕೊಳೆಯದೆ, ಮೊಳಕೆ ಹಾಳಾಗದಂತೆ ಇದ್ದು ನೆರೆ ಇಳಿದ ನಂತರ ಸದೃಢವಾಗಿ ಕ್ಷಾರಯುಕ್ತ ಜಮೀನಿನಲ್ಲಿ ಅರಳಬಲ್ಲ ಶಕ್ತಿ ಹೊಂದಿರುವ ಕಗ್ಗ ನಮ್ಮ ಪೂರ್ವಜರು ಅಭಿವೃದ್ಧಿಪಡಿಸಿದ ಅಪರೂಪದ ವಿಶಿಷ್ಟ ಭತ್ತದ ತಳಿ. ಕಗ್ಗ ಭತ್ತಕ್ಕೆ ಯಾವುದೇ ರೀತಿಯ ರಾಸಾಯನಿಕ ಅಥವಾ ಸಾವಯದ ಗೊಬ್ಬರ ಬೇಡ. ಪ್ರವಾಹದೊಂದಿಗೆ ಉಕ್ಕಿಬರುವ ಮಣ್ಣಿನಲ್ಲಿ ಸಿಗುವ ಪೋಷಕಾಂಶದಿಂದ ಕಗ್ಗ ಭತ್ತವು ಸಮೃದ್ಧವಾಗಿ ಬೆಳೆಯುತ್ತದೆ.
ಧನ್ಯವಾದಗಳು.
GIPHY App Key not set. Please check settings