ಒಂದೇ ಒಂದು ಶಾಸನ ಸಭೆಯುಳ್ಳ ರಾಜ್ಯಗಳಲ್ಲಿ ವಿಧಾನ ಸಭೆ ಮುಖ್ಯ ಭೂಮಿಕೆಯಾಗಿಯೂ ಹಾಗೂ ಎರಡು ಶಾಸನ ಸಭೆ, ವಿಧಾನ ಸಭೆ ಹಾಗೂ ವಿಧಾನ ಪರಿಷತ್ತುಗಳುಳ್ಳ ರಾಜ್ಯಗಳಲ್ಲಿ ಕೆಳಮನೆಯಾಗಿಯೂ ವಿಧಾನ ಸಭೆ ಕಾರ್ಯ ನಿರ್ವಹಿಸುತ್ತದೆ.
ಕೇಂದ್ರದಲ್ಲಿ ಲೋಕಸಭೆ ಕೆಳಮನೆಯಾದರೆ, ರಾಜ್ಯ ಸಭೆ ಮೇಲ್ಮನೆಯಾಗಿರುತ್ತದೆ. ಅಂತೆಯೇ ರಾಜ್ಯಗಳಲ್ಲಿ ವಿಧಾನ ಸಭೆ ಕೆಳಮನೆಯಾಗಿದ್ದು, ವಿಧಾನ ಪರಿಷತ್ತು ಮೇಲ್ಮನೆಯಾಗಿರುತ್ತದೆ. ವಿಧಾನ ಪರಿಷತ್ತು ಎಲ್ಲ ರಾಜ್ಯಗಳಲ್ಲೂ ಕಡ್ಡಾಯವಲ್ಲ. ಸದ್ಯಕ್ಕೆ ಭಾರತದ ೭ ರಾಜ್ಯಗಳು ವಿಧಾನ ಪರಿಷತ್ತು ಹೊಂದಿವೆ. ರಾಜ್ಯದ ಸ್ಥಾನ ಮಾನವಿಲ್ಲದ ಎರಡು ಕೇಂದ್ರಾಡಳಿತ ಪ್ರದೇಶಗಳು ವಿಧಾನಸಭೆಯನ್ನು ಹೊಂದಿವೆ. ಅವುಗಳೆಂದರೆ ದೆಹಲಿ ಮತ್ತು ಪುದುಚೇರಿ.
ವಿಧಾನಸಭೆಯ ಸದಸ್ಯರು ವಿಧಾನಸಭೆಯ ವ್ಯಾಪ್ತಿಯ ಒಂದು ಕ್ಷೇತ್ರದ ಹದಿನೆಂಟು ವಯಸ್ಸು ಮೀರಿದ ಮತದಾರರಿಂದ ನೇರವಾಗಿ ಆಯ್ಕೆಯಾಗಿರುತ್ತಾರೆ. ವಿಧಾನಸಭೆಯ ಸದಸ್ಯರ ಬಲವನ್ನು ಭಾರತದ ಸಂವಿಧಾನ ೬೦ಕ್ಕೆ ಕಡಿಮೆ ಹಾಗು ೫೦೦ಕ್ಕೆ ಹೆಚ್ಚು ಇರಬಾರದು ಎಂದು ನಮೂದಿಸಿದೆ. ಆದಾಗ್ಯೂ ಕೆಲ ಚಿಕ್ಕ ರಾಜ್ಯಗಳ ವಿಚಾರದಲ್ಲಿ ವಿಧಾನ ಸಭಾ ಸದಸ್ಯರ ಸಂಖ್ಯೆ ೬೦ಕ್ಕೆ ಕಡಿಮೆಯಿದೆ. ಗೋವಾ, ಸಿಕ್ಕಿಂ, ಮಿಝೋರಾಂ ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚ್ಚೇರಿಯಲ್ಲಿ ವಿಧಾನ ಸಭಾ ಸದಸ್ಯರ ಸಂಖ್ಯೆ ೬೦ಕ್ಕಿಂತಲೂ ಕಡಿಮೆಯಿದ್ದು ಆ ರಾಜ್ಯಗಳಿಗೆ ವಿಧಾನಸಭಾ ಸದಸ್ಯರ ಸಂಖ್ಯಾ ಬಲದ ವಿಚಾರದಲ್ಲಿ ಸಡಿಲಿಕೆ ಕೊಡಲಾಗಿದೆ.
ಕೆಲವು ರಾಜ್ಯಗಳಲ್ಲಿ ರಾಜ್ಯಪಾಲರು ಒಬ್ಬ ವ್ಯಕ್ತಿಯನ್ನು ವಿಧಾನಸಭಾ ಸದಸ್ಯನಾಗಿ ನೇಮಕ ಮಾಡಿಕೊಳ್ಳಬಹುದು. ಆ ವ್ಯಕ್ತಿ ಅಲ್ಪ ಸಂಖ್ಯಾತ ಪ್ರತಿನಿಧಿಯಂತಿದ್ದು, ವಿಧಾನಸಭೆಯಲ್ಲಿ ಅಲ್ಪಸಂಖ್ಯಾತರು ಕಡಿಮೆ ಸಂಖ್ಯೆಯಲ್ಲಿದ್ದರೆ ಅದನ್ನು ಸರಿದೂಗಿಸಲು ರಾಜ್ಯಪಾಲರಿಂದ ನೇಮಕವಾಗುತ್ತಾನೆ. ಎಲ್ಲ ವಿಧಾನಸಭಾ ಸದಸ್ಯರ ಕಾಲಾವಧಿ ಐದು ವರ್ಷಗಳಾಗಿದ್ದು ಆ ಸರ್ಕಾರದ ಐದು ವರ್ಷ ಮುಗಿಯುತ್ತಿದ್ದಂತೆಯೇ ಚುನಾವಣೆ ಎದುರಿಸಬೇಕಾಗುತ್ತದೆ.
ಒಂದು ವಿಧಾನ ಸಭೆಯ ಅವಧಿ ಐದು ವರ್ಷಗಳಾಗಿರುತ್ತದೆ. ತುರ್ತು ಪರಿಸ್ಥಿತಿಗಳಂತಹ ಸಂಧರ್ಭದಲ್ಲಿ ವಿಧಾನ ಸಭೆಯ ಅವಧಿಯನ್ನು ರಾಜ್ಯ ಪಾಲರು ವಿಸ್ತರಿಸಬಹುದು ಅಥವಾ ಕಡಿತ ಮಾಡಲೂಬಹುದು. ವಿಧಾನ ಸಭೆಯ ಅವಧಿಯನ್ನು ರಾಜ್ಯಪಾಲರು ಗರಿಷ್ಠ ೬ ತಿಂಗಳವರೆಗೆ ವಿಸ್ತರಿಸಬಹುದು.
ಮುಖ್ಯಮಂತ್ರಿಗಳ ಮನವಿಯ ಆಧಾರದ ಮೇಲೆ ವಿಧಾನ ಸಭೆಯನ್ನು ವಿಸರ್ಜಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ. ವಿಧಾನ ಸಭೆಯಲ್ಲಿ ವಿಶ್ವಾಸಮತ ಗಳಿಸುವಲ್ಲಿ ವಿಫಲವಾದರೆ ಅಥವಾ ಸರ್ಕಾರ ರಚಿಸಲು ಅವಶ್ಯವಾದ ಸದಸ್ಯ ಬಲ ಹೊಂದಿಲ್ಲವಾದರೆ ರಾಜ್ಯಪಾಲರು ವಿಧಾನಸಭೆ ವಿಸರ್ಜಿಸಲು ಅವಕಾಶವಿದೆ.
ಸಂವಿಧಾನದ 170ನೇ ವಿಧಿಯ ಅನ್ವಯ ಪ್ರತಿಯೊಂದು ರಾಜ್ಯದ ವಿಧಾನಸಭೆಗೆ ನೇರ ಚುನಾವಣೆ ಮೂಲಕ ಸದಸ್ಯರ ಆಯ್ಕೆ ನಡೆಯುತ್ತದೆ. ಒಂದು ವಿಧಾನಸಭೆಯಲ್ಲಿ ಕನಿಷ್ಠ 60 ಹಾಗೂ ಗರಿಷ್ಠ 500 ಸದಸ್ಯರು ಇರಬೇಕು.
ಚುನಾವಣಾ ಕ್ಷೇತ್ರವನ್ನು ಹೇಗೆ ವಿಭಾಗ ಮಾಡಬೇಕು ಎಂಬ ಬಗ್ಗೆ ಭಾರತೀಯ ಸಂವಿಧಾನದ 170(2)(1)ನೇ ವಿಧಿಯಲ್ಲಿ ವಿವರಿಸಲಾಗಿದೆ. ಪ್ರತಿಯೊಂದು ಚುನಾವಣಾ ಕ್ಷೇತ್ರದಲ್ಲಿ ಇರುವ ಜನಸಂಖ್ಯೆ ಮತ್ತು ಆ ಕ್ಷೇತ್ರದಲ್ಲಿ ಮೀಸಲು ಇರುವ ಸ್ಥಾನಗಳ ಸಂಖ್ಯೆ ಇವೆರಡರ ನಡುವಿನ ಅನುಪಾತವು ಸಾಧ್ಯವಾದಷ್ಟು ಮಟ್ಟಿಗೆ ರಾಜ್ಯದಾದ್ಯಂತ ಒಂದೇ ರೀತಿ ಆಗಿರಬೇಕು. ಹಿಂದಿನ ಜನಗಣತಿಗೆ ಅನುಗುಣವಾಗಿ ಜನಸಂಖ್ಯೆಯ ಮಾನದಂಡವನ್ನು ಇಟ್ಟು ಕೊಳ್ಳಬೇಕು. (10 ವರ್ಷಕ್ಕೊಮ್ಮೆ ನಡೆಯುವ) ಜನಗಣತಿಯು ಪೂರ್ಣಗೊಂಡ ಮೇಲೆ, ಪ್ರತಿಯೊಂದು ರಾಜ್ಯದ ವಿಧಾನಸಭೆಯಲ್ಲಿನ ಒಟ್ಟು ಸ್ಥಾನಗಳ ಆಧಾರದ ಮೇಲೆ ಪ್ರತಿಯೊಂದು ರಾಜ್ಯವನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಭಾಗಿಸಿರುವ ಬಗ್ಗೆ ಸಂಸತ್ತು ನಿರ್ಧರಿಸಬೇಕು. ಈ ಸಂಬಂಧ ಒಂದು ಪ್ರಾಧಿಕಾರವನ್ನು ರೂಪಿಸಬೇಕು. ಆ ಪ್ರಕ್ರಿಯೆ ಮುಗಿಯುವವರೇಗೆ ಅಸ್ತಿತ್ವದಲ್ಲಿ ಇರುವ ವಿಧಾನಸಭೆಯು ಕಾರ್ಯ ಮುಂದುವರಿಸಬೇಕು. ಆ ನಂತರವಷ್ಟೇ ವಿಧಾನಸಭೆಯ ವಿಸರ್ಜನೆ ಮಾಡಬೇಕು. ರಾಷ್ಟ್ರಪತಿಯವರ ಅನುಮತಿಯ ನಂತರ ಮುಂದಿನ ಪ್ರಕ್ರಿಯೆ ಕೈಗೊಳ್ಳಬೇಕು. ಈ ಮಧ್ಯೆ, ಚುನಾವಣೆ ಏನಾದರೂ ನಡೆದರೆ, ಅಸ್ತಿತ್ವದಲ್ಲಿರುವ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಆಧಾರದ ಮೇಲೆಯೇ ನಡೆಯಬೇಕು.
ವಿಧಾನ ಸಭೆಯ ಸದಸ್ಯನಾಗಲು ಇಚ್ಛಿಸುವ ವ್ಯಕ್ತಿಯು ಚುನಾವಣೆಯಲ್ಲಿ ಯಾವುದಾದರೂ ಒಂದು ಪಕ್ಷದಿಂದ ಅಥವಾ ಸ್ವತಂತ್ರವಾಗಿ ಸ್ಫರ್ಧಿಸಬೇಕು. ಸ್ಫರ್ಧಿಸುವ ಮುನ್ನ ಈ ಕೆಳಕಂಡ ಅರ್ಹತೆಗಳನ್ನು ಹೊಂದಿರಬೇಕು.
ಭಾರತೀಯ ನಾಗರೀಕನಾಗಿರಬೇಕು.
೨೫ ವರ್ಷಗಳನ್ನು ಪೂರೈಸಿರಬೇಕು.
ಯಾವುದೇ ಮಾನಸಿಕ ಖಾಯಿಲೆಗಳಿಂದ ಬಳಲುತ್ತಿರಬಾರದು.
ವಂಚನೆ ಇನ್ನಿತರ ಅಪರಾಧಗಳಲ್ಲಿ ಭಾಗಿಯಾಗಿರಬಾರದು.
ಯಾವುದೇ ಕ್ರಿಮಿನಲ್ ಮೊಕದ್ದಮೆಗಳಲ್ಲಿ ಭಾಗಿಯಾಗಿರಬಾರದು.
ವಿಧಾನ ಸಭೆಯ ಕಾರ್ಯ ಕಲಾಪಗಳು,
ಅಧಿವೇಶನಗಳು ವಿಧಾನ ಸಭಾಧ್ಯಕ್ಷರ ನೇತೃತ್ವದಲ್ಲಿ ನಡೆಯುತ್ತವೆ. ಸಭಾಧ್ಯಕ್ಷರ ಗೈರುಹಾಜರಿ ಸಂಧರ್ಭಗಳಲ್ಲಿ ಉಪಸಭಾಧ್ಯಕ್ಷರು ವಿಧಾನ ಸಭೆಯನ್ನು ಮುನ್ನಡೆಸುತ್ತಾರೆ. ಸ್ಪೀಕರ್ ರವರು ಶೂನ್ಯ ನ್ಯಾಯಾಧೀಶರಂತೆ ಕಾರ್ಯ ನಿರ್ವಹಿಸಲಿದ್ದು ಸಭೆಯಲ್ಲಿ ನಡೆಯುವ ಎಲ್ಲಾ ಚರ್ಚೆಗಳನ್ನು, ಮಾತು ಕತೆಗಳನ್ನು ನಿಭಾಯಿಸುತ್ತಾರೆ.
ವಿಧಾನ ಸಭೆಯು ವಿಧಾನ ಪರಿಷತ್ ನಷ್ಟೇ ಸಾಂವಿಧಾನಿಕ ಶಕ್ತಿಯುಳ್ಳದ್ದಾಗಿರುತ್ತದೆ. ಇದಕ್ಕೆ ಹಣಕಾಸಿನ ಮಸೂದೆ ಹೊರತಾಗಿರುತ್ತದೆ. ಹಣಕಾಸಿನ ಮಸೂದೆ ವಿಧಾನಪರಿಷತ್ ವ್ಯಾಪ್ತಿಗೆ ಬರುವುದಿಲ್ಲವಾದ್ದರಿಂದ ಆ ವಿಚಾರದಲ್ಲಿ ವಿಧಾನಸಭೆಯೇ ಮುಖ್ಯವಾಗಿರುತ್ತದೆ.
ವಿಧಾನಸಭೆಗಿರುವ ವಿಶೇಷ ಅಧಿಕಾರಗಳು
ಶಾಸನೀಯ ಅಧಿಕಾರ-
ರಾಜ್ಯ ಪಟ್ಟಿ ಸಮವರ್ತಿ ಪಟ್ಟಿಯಲ್ಲಿ ಬರುವ ವಿಷಯದ ಮೇಲೆ ಶಾಸನ ಮಾಡುವ ಅಧಿಕಾರ ವಿಧಾನಸಭೆಗೆ ಇದೆ, ಶಾಸನ ಕಾಯ್ದೆ ಆಗಬೇಕಾದರೆ ರಾಜ್ಯದ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದು ರಾಜ್ಯಪಾಲರ ಸಹಿ ಪಡೆಯಬೇಕು. ರಾಜ್ಯಪಾಲರು ಕೆಲವು ಮಸೂದೆಗಳನ್ನು ಒಪ್ಪಿಕೊಳ್ಳ ಬಹುದು ಅಥವಾ ರಾಷ್ಟ್ರಪತಿಗಳ ಒಪ್ಪಿಗೆಗೆ ಕಳುಹಿಸಬಹುದು.
ಹಣಕಾಸಿನ ಅಧಿಕಾರ- ಹಣಕಾಸಿನ ವಿಷಯದಲ್ಲಿ ಸಂಬಂಧಿಸಿದಂತೆ ವಿಧಾನಸಭೆಗೆ ಹೆಚ್ಚಿನ ಅಧಿಕಾರ ಲಭಿಸಿದೆ.ಹಣಕಾಸಿನ ಮಸೂದೆಯನ್ನು ವಿಧಾನಸಭೆಯ ಒಪ್ಪಿಗೆಯ ನಂತರ ವಿಧಾನ ಪರಿಷತ್ಗೆ ಕಳಿಸಲಾಗುತ್ತದೆ ವಿಧಾನ ಪರಿಷತ್ ಮಸೂದೆಯನ್ನು ತಿರಸ್ಕರಿಸಲು ಅಧಿಕಾರವಿರುವುದಿಲ್ಲ ಕೇವಲ ಸೂಚನೆಗಳನ್ನು ನೀಡಬಹುದು. ವಿಧಾನಸಭೆಗೆ ಸಲಹೆ ಸೂಚನೆಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರವಿದೆ.
ಧನ್ಯವಾದಗಳು.
GIPHY App Key not set. Please check settings