ಮಾವಿನ ಹಣ್ಣು ಹಣ್ಣುಗಳ ರಾಜ ಎಂದೇ ಖ್ಯಾತಿ. ನಾರುರಹಿತ ಬಹಳ ಸಿಹಿ ಮತ್ತು ರುಚಿಕರ ತಿರಳು. ಹೇರಳವಾಗಿರುವ ವಿಟಮಿನ್ ‘ಎ’ ಹಾಗೂ ‘ಸಿ’ ಅಂಶ ಹೊಂದಿದೆ.
ಜಗತ್ತಿನಾದ್ಯಂತ ಹೆಸರು ಮಾಡಿದ ಸುಮಾರು 500 ಮಾವಿನ ತಳಿಗಳಿವೆ. ಅದರಲ್ಲಿ ಭಾರತದಲ್ಲಿಯೇ 300ಕ್ಕೂ ಹೆಚ್ಚು ತಳಿಗಳು ದೇಶಾದ್ಯಂತ ಹರಡಿಕೊಂಡಿವೆ. ಅವುಗಳಲ್ಲಿ 30 ತುಂಬಾ ಜನಪ್ರಿಯವಾಗಿವೆ. ಅಮೆರಿಕಾದ ಫ್ಲಾರಿಡಾದ ಕೊರಲ್ ಗ್ಯಾಬಲ್ಸ್ ಎಂಬಲ್ಲಿ ಒಂದೇ ಕಡೆಯಲ್ಲಿ ಸುಮಾರು 400ಕ್ಕೂ ಹೆಚ್ಚು ತಳಿಗಳ ಸಂಗ್ರಹವಿದ್ದು, ಜಗತ್ತಿನ ಅತಿ ಹೆಚ್ಚು ಸಂಖ್ಯೆಯ ಮಾವಿನ ತಳಿಗಳ ಸಂಗ್ರಹವಾಗಿದೆ. ಫ್ಲಾರಿಡಾ ರಾಜ್ಯವು ವರ್ಷಪೂರ್ತಿ ಮಾವಿನ ಬೆಳೆಗೆ ಒಳ್ಳೆಯ ವಾತಾವರಣವನ್ನು ಹೊಂದಿದೆ. ತಳಿಗಳ ವಿವಿಧತೆಯ ಮಾವಿನ ಸಂಭ್ರಮವನ್ನು ಅನುಭವಿಸಲು ಇದು ಸಕಾಲ. ಇನ್ನೇನು ಒಂದೊಂದೇ ಬಗೆಯ ಮಾವು ಮಾರುಕಟ್ಟೆಯಲ್ಲಿ ಕಾಣತೊಡಗುತ್ತದೆ.
ಮಾವಿನ ತಳಿಗಳು
*ರಸಪುರಿ
*ಅಲ್ಫಾನ್ಸೋ (ಕರ್ನಾಟಕ)
*ರತ್ನಗಿರಿ (ಮಹಾರಾಷ್ಟ್ರ)
*ಮಲ್ಗೋವ
*ಬಾದಾಮ್
*ಮಲ್ಲಿಕ
*ನೆಕ್ಕರೆ
*ತೊತಾಪುರಿ
*ಅಪ್ಪೆಮಿಡಿ (ಕರ್ನಾಟಕ-ವಿಶಿಷ್ಟ ತಳಿ)
*ನೀಲಂ

ಜನಪ್ರಿಯತೆಯಲ್ಲಿ “ಆಲ್ಫಾನ್ಸೊಗೆ ” ಜಗತ್ತಿನಲ್ಲಿ ಯಾವುದೂ ಸಾಟಿ ಇಲ್ಲ. ಈ ಆಲ್ಫಾನ್ಸೊವನ್ನು “ಮಾವಿನ ರಾಜ” ಎಂದೇ ಕರೆಯಲಾಗುತ್ತದೆ. ತುಂಬಾ ಸಿಹಿಯಾದ, ಬರೀ ತಿರುಳೇ ಇರುವ ಹಣ್ಣು. ಮಾವಿನಲ್ಲಿ ತಳಿಗಳ ವಿಕಾಸಕ್ಕೆ ಅದರಲ್ಲೂ “ಆಲ್ಫಾನ್ಸೊ” ಅಭಿವೃದ್ಧಿಗೆ ಪೋರ್ಚುಗೀಸರು ಕಲಿಸಿಕೊಟ್ಟ “ಕಸಿ” ಕಟ್ಟುವ ವಿಧಾನ ಕಾರಣ. ಆಲ್ಫ್ಯಾನ್ಸೊ ಕೂಡ ಪೋರ್ಚುಗೀಸರ ತಂತ್ರಗಳಿಂದ ಕಸಿ ಕಟ್ಟುವುದರಿಂದಲೇ ಅಭಿವೃದ್ಧಿಗೊಂಡಿದೆ. ಹಾಗಾಗಿ ಭಾರತದಲ್ಲಿ ಪೋರ್ಚುಗೀಸ್ ಮಿಲಿಟರಿ ಅಧಿಕಾರಿಯಾಗಿದ್ದ ಆಲ್ಫಾನ್ಸೊ ಆಲ್ಬುಕರ್ಕ್ ಎಂಬಾತನ ಗೌರವಾರ್ಥ ತಳಿಗೆ ಆಲ್ಪಾನ್ಸೊ ಎಂದು ಹೆಸರಿಸಲಾಗಿದೆ.

ಕರ್ನಾಟಕದ ಮತ್ತೊಂದು ಜನಪ್ರಿಯ ಮಾವಿನ ತಳಿ ಎಂದರೆ “ರಸಪುರಿ”. ಹಣ್ಣಿನ ತುಂಬೆಲ್ಲಾ ರಸಭರಿತವಾದ ಇದನ್ನು ರಾಜ್ಯದ ಅತ್ಯಂತ ಜನಪ್ರಿಯ ತಳಿ ಎಂದೇ ಗುರುತಿಸುತ್ತಾರೆ. ಮರದಲ್ಲೇ ಹಣ್ಣಾದ ರಸಪುರಿಯ ರುಚಿಗೆ ಯಾವುದೇ ಮಾವೂ ಸಾಟಿಯಾಗಲಾರದೂ ಎನ್ನುವ ಅಭಿಪ್ರಾಯಗಳೂ ಇವೆ. ರಾಜ್ಯದ ಒಳನಾಡಿನಲ್ಲಿ ಹೋಳಿಗೆಯ ಜೊತೆಗೆ ಮಾವಿನ ಹಣ್ಣಿನ ಸೀಕರಣೆ ಮಾಡಿ ಊಟ ಮಾಡುತ್ತಾರೆ.
“ಬಂಗನಪಲ್ಲಿ” ಮೇ-ಜುಲೈ ತಿಂಗಳ ನಡುವೆ ದೊರೆಯುವ ಮಧ್ಯಂತರ ತಳಿಯಾಗಿದೆ.ಈ ಹಣ್ಣುಗಳು ಹೊರಗಿನಿಂದ ಬಂಗಾರದ ಹಳದಿ ಬಣ್ಣ ಹಾಗೂ ಒಳಗೆ ಹುಲ್ಲು ಹಳದಿಯಿಂದ ಬಂಗಾರದ ಹಳದಿ ಬಣ್ಣದಲ್ಲಿರುತ್ತವೆ. ಇದರ ತಿರುಳು ನಾರುರಹಿತವಾಗಿದ್ದು, ಹಳದಿ ಬಣ್ಣದಲ್ಲಿರುತ್ತವೆ, ತಿನ್ನಲು ಬಹಳ ಸಿಹಿಯಾಗಿರುತ್ತವೆ. ಈ ಹಣ್ಣುಗಳು ಹೆಚ್ಚು ದಿನದವರೆಗೆ ಕೆಡುವುದಿಲ್ಲ. ರಫ್ತಿಗೆ ಸೂಕ್ತವಾದ ತಳಿಯಾಗಿದೆ.

“ತೊತಾಪುರಿ” ಅಥವಾ ಗಿಣಿಮೂತಿ ಮಾವಿನಹಣ್ಣು ಒಂದು ರೀತಿಯಲ್ಲಿ ಹೆಚ್ಚು ಫಲ ಕೊಡುವ ಮಾವು. ಇದನ್ನು ಸಂಸ್ಕರಿಸಿ ಜ್ಯೂಸ್ ಮಾಡುವ, ರಸಾಯನ ಮಾಡುವ, ಜಾಮ್ ಮಾಡುವ ಉದ್ಯಮಗಳಲ್ಲಿ ಹೆಚ್ಚು ಬಳಸುತ್ತಾರೆ. ಗಿಡದ ತುಂಬಾ ಕಾಯಿ ಬಿಟ್ಟು ಜೋತು ಬೀಳುವಂತೆ ಕಾಣುವ ಇದರ ಕಾಯಿಗಳು ಮರದ ತುಂಬಾ ಕುಳಿತ ಹಸಿರು ಗಿಳಿಗಳಂತೆ ಕಾಣುತ್ತವೆ. ಕಾಯಿಯಾಗಿದ್ದಾಗಲೂ ತಿನ್ನಲು ಬಯಸುವ ಮಾವು ಇದು.
“ದಶೇಹರಿ”,ಈ ಹಣ್ಣುಗಳು ಸಾಧಾರಣ ಗಾತ್ರ ಹೊಂದಿರುತ್ತದೆ, ಅಂಡಾಕಾರವಿದ್ದು, ಹಳದಿ ಬಣ್ಣ ಹೊಂದಿರುತ್ತವೆ. ಇದರ ವಾಟೆ ಸಣ್ಣಗಿದ್ದು, ಹೆಚ್ಚು ದಿನ ಕೆಡುವುದಿಲ್ಲ. “ಅಮ್ರಪಾಲಿ”. ಈ ಮಾವಿನ ತಳಿಯು “ದಶೆರಿ” ಮತ್ತು “ನೀಲಂ” ತಳಿಗಳಿಂದ ಸಂಕರಗೊಂಡಿದೆ. ಇದರ ವಿಶೇಷತೆಯೆಂದರೆ ಮರ ಗಿಡ್ಡವಾಗಿದ್ದು, ಹಣ್ಣುಗಳೂ ಚಿಕ್ಕದಾಗಿದ್ದು, ಗೊಂಚಲು-ಗೊಂಚಲಾಗಿ ಬಿಡುತ್ತವೆ. ಹಣ್ಣುಗಳಲ್ಲಿ ಇತರೇ ತಳಿಗಳಿಗಿಂತಾ ಹೆಚ್ಚು ಬೀಟಾ ಕೆರೊಟಿನ್ ಇದ್ದು, ಹಣ್ಣು ಹೆಚ್ಚು ಕಾಲ ತಾಳುವುದಿಲ್ಲ, ಬೇಗನೆ ಹಾಳಾಗುತ್ತದೆ. ಸಾಕಷ್ಟು ಸಿಹಿಯೂ ಇದ್ದು, ದಟ್ಟ ಕಿತ್ತಳೆ ಕೆಂಪು ಬಣ್ಣವನ್ನು ಹೊಂದಿರುತ್ತದೆ.
“ಕೇಸರ್” ಲಭ್ಯವಾಗುವ ಆರಂಭದ ತಳಿಯಾಗಿದೆ. ಸಾಧಾರಣ ಗಾತ್ರ, ಸಿಹಿಯಾದ ರುಚಿ ಹಾಗೂ ನಾರುರಹಿತ ಹೆಚ್ಚು ಸಕ್ಕರೆ-ಆಸಿಡ್ ಮಿಶ್ರಣ. ಈ ಹಣ್ಣುಗಳು ಮಾಗಿದ ಮೇಲೆ ಆಕರ್ಷಕ ಏಪ್ರಿಕಾಟ್ ಹಳದಿ ಬಣ್ಣದಿಂದ ತಿಳಿ ಕೆಂಪು ಬಣ್ಣಕ್ಕೆ ತಿರುಗುತ್ತವೆ.

“ಮಲಗೊವ” ಅಥವಾ ಮಲಗೊಬಾ ಮೂಲತಃ ತಮಿಳುನಾಡಿನ ಹಣ್ಣು. ಬಹುಶಃ ಇತರೇ ಎಲ್ಲಾ ತಳಿಗಳಿಗಿಂತಾ ದೊಡ್ಡ ಹಣ್ಣು ಮಲಗೊವಾ. ಪರಿಮಳ ಮತ್ತು ಸ್ವಾದಕ್ಕೆ ಹೆಸರು ಮಾಡಿದೆ. ಇದರ ತಿರುಳು ವಿಶೇಷವಾಗಿದ್ದು, ಸ್ವಲ್ಪ ದಪ್ಪ ಸಿಪ್ಪೆಯನ್ನು ಹೊಂದಿದೆ. ಎಲ್ಲದಕ್ಕಿಂತಲೂ ಇದು ಉಂಟುಮಾಡಿರುವ ಮಾಂತ್ರಿಕತೆ ಎಂದರೆ ಅಮೆರಿಕಾ ನೆಲದಲ್ಲಿ ಮಾವಿನ ತಳಿಯ ಪರಂಪರೆಯನ್ನೇ ಆಳುತ್ತಿದೆ. ಮೊದಲು 1885ರಲ್ಲಿ ಅಮೆರಿಕಾವನ್ನು ಮಲಗೊವಾ ತಲುಪಿತು. ನಂತರದಲ್ಲಿ ಮೂಲ ಮಲಗೊವಾ ತಳಿಯು 1902ರಲ್ಲಿ ಜಾನ್ ಹೆಡನ್ ಎಂಬಾತನ ತೋಟವನ್ನು ಹೊಕ್ಕು, ಅಲ್ಲಿಗೆ ಹೊಂದಿಕೊಂಡು ಅದ್ಭುತ ಇಳುವರಿ ನೀಡಿದ ಮರವಾಗಿದೆ.

“ಮಲ್ಲಿಕಾ” ನೀಲಂ ಮತ್ತು ದಶೆರಿಗಳಿಂದ ಸಂಕರಗೊಂಡ ಹೈಬ್ರಿಡ್ ತಳಿ. ಆರಂಭದಲ್ಲಿ ತುಂಬಾ ಜನಪ್ರಿಯವಾಗಿ ಹೊರ ಬಂದ ತಳಿ ಅದರ ಮಧುರತೆಯಿಂದ ಹೆಸರುವಾಸಿಯಾಗಿತ್ತು. ಈಗಲೂ ರುಚಿ ಮತ್ತು ಪರಿಮಳವನ್ನು ಹೊಂದಿದ್ದರೂ ಮಾರುಕಟ್ಟೆ ಹಾಗೂ ರೈತರನ್ನು ಹೆಚ್ಚು ಆಕರ್ಷಿಸಿಲ್ಲ. ತೆಳುವಾದ ಸಿಪ್ಪೆಯ ಈ ಹಣ್ಣು ಹೆಚ್ಚಿ ತಿನ್ನಲು ಅದ್ಭುತವಾದ ಹಣ್ಣು. ಅತ್ಯಂತ ಸಿಹಿಯಾದ ಇದನ್ನು ಜೇನುತುಪ್ಪದ ಸಿಹಿಗೆ ಹೋಲಿಸುವುದುಂಟು.
“ನೀಲಂ” ಇದು ಮಾಸದ ಕೊನೆಯಲ್ಲಿ ದೊರೆಯುವ ತಳಿಯಾಗಿದೆ. ಮಧ್ಯಮ ಗಾತ್ರ, ಅಂಡಾಕಾರ ಹಾಗೂ ಕೇಸರಿ ಮಿಶ್ರಿತ ಹಳದಿ ಬಣ್ಣದಲ್ಲಿರುತ್ತವೆ.
“ನೀಲಂ” ನಮ್ಮ ರಾಜ್ಯದಲ್ಲೂ ಸೇರಿ ಇತರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ತಡವಾಗಿ ಬರುವ ಹಣ್ಣಿನ ತಳಿ. ತೆಳುವಾದ ಸಿಪ್ಪೆಯ, ಸ್ವಲ್ಪ ಭಿನ್ನವಾದ ರುಚಿ ಮತ್ತು ಪರಿಮಳವನ್ನು ಹೊಂದಿರುವ ನೀಲಂ ಅನ್ನು ನೀಲಂ ರುಚಿ ಎಂದೇ ಹೆಸರಾಗಿದೆ. ಇನ್ನೇನು ಮಾವು ಮುಗಿದೇ ಹೋಯಿತು ಎಂದುಕೊಂಡಾಗಲೂ ಮಾರುಕಟ್ಟೆಯಲ್ಲಿ ಮೀಡಿಯಂ ಗಾತ್ರದಿಂದ ಚಿಕ್ಕ ಚಿಕ್ಕ ಹಣ್ಣುಗಳನ್ನು ಹಳದಿ-ಮಿಶ್ರಿತ ಹಸಿರು ಬಣ್ಣದಲ್ಲಿ ಕಾಣುತ್ತಿದ್ದರೆ ಅವು ಖಂಡಿತಾ ನೀಲಂ ಹಣ್ಣುಗಳೇ! ಒಳ್ಳೆಯ ಇಳುವರಿಯನ್ನು ಹೊಂದಿರುವ ಈ ತಳಿಯು ಹಲವು ಅಭಿವೃದ್ಧಿ ಹೊಂದಿರುವ ತಳಿಗಳ ಒಂದು ಪೋಷಕನಾಗಿ ಬೆಂಬಲವನ್ನಿತ್ತಿದೆ. ಹಸಿರಿರುವಾಗಲೇ ಕೊಯಿಲು ಮಾಡಿ ತುಂಬಾ ದಿನಗಳ ಕಾಲ ಇಡಬಲ್ಲ ಗುಣವನ್ನು ನೀಲಂ ಹೊಂದಿದ್ದು, ಇದು ಪಾಕಿಸ್ಥಾನದಲ್ಲೂ ಜನಪ್ರಿಯ ತಳಿಯಾಗಿದೆ.

“ಇಮಾಂಪಸಂದ್” ಎಂಬ ಒಂದು ತಳಿಯನ್ನೂ ಮಾವಿನ ರಾಜ ಎಂದೇ ಕರೆಯಲಾಗುತ್ತದೆ. ಆಂಧ್ರ ಪ್ರದೇಶ ಹಾಗೂ ರಾಜ್ಯದ ಆಂಧ್ರಗಡಿಯ ಭಾಗಗಳಲ್ಲಿ ಅತ್ಯಂತ ಪ್ರಸಿದ್ಧವಾದ ಈ ತಳಿಯು ಮೂಲ ಆಲ್ಫನ್ಸೊ ಬಗೆಯದು ಎನ್ನಲಾಗುತ್ತದೆ. ಇದನ್ನು ಮೂಲದಲ್ಲಿ ಕೇರಳ ರಾಜ್ಯದಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು ಮೊಘಲ್ ಚಕ್ರವರ್ತಿ ಹುಮಾಯೂನ್ ಸ್ಮರಣೆಯಲ್ಲಿ ಹೆಸರಿಸಿದ್ದೆಂದು ಹೇಳಲಾಗುತ್ತದೆ. ಹಿಮಾಯತ್ ಪಸಂದ್, ಹುಮಾಯೂನ್ ಪಸಂದ್ ಎಂಬ ಹೆಸರುಗಳಿಂದಲೂ ಇದು ಪ್ರಸಿಧ್ಧವಾಗಿದೆ. ಇದು ರುಚಿಯಲ್ಲಿ ದೊಡ್ಡ ಹೆಸರು ಮಾಡಿದ ತಳಿ.
ಧನ್ಯವಾದಗಳು.
GIPHY App Key not set. Please check settings