in ,

ಹಳದಿ ಲೋಹ ಚಿನ್ನ ಮಹಿಳೆಯರ ಅಚ್ಚುಮೆಚ್ಚು

ಚಿನ್ನ ಮಹಿಳೆಯರ ಅಚ್ಚುಮೆಚ್ಚು
ಚಿನ್ನ ಮಹಿಳೆಯರ ಅಚ್ಚುಮೆಚ್ಚು

ಅಂತಾರಾಷ್ಟ್ರೀಯ ಹಣಹಾಸು ನಿಧಿಯು ಚಿನ್ನವನ್ನು ಆರ್ಥಿಕ ಪ್ರಮಾಣವನ್ನಾಗಿ ಪರಿಗಣಿಸುತ್ತದೆ. ಚಿನ್ನವು ರಾಸಾಯನಿಕ ಕ್ರಿಯೆಗಳಿಗೆ ತೀವ್ರ ಪ್ರತಿರೋಧ ಒಡ್ಡುವುದರಿಂದಾಗಿ ಆಧುನಿಕ ಕೈಗಾರಿಕೆಗಳಲ್ಲಿ ದಂತಶಾಸ್ತ್ರದಲ್ಲಿ ಮತ್ತು ವಿದ್ಯುನ್ಮಾನ ಉದ್ಯಮದಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತಿದೆ.

ಚಿನ್ನವು ಹೆಚ್ಚಿನ ರಾಸಾಯನಿಕಗಳೊಂದಿಗೆ ಪ್ರತಿಕ್ರಿಯೆ ನಡೆಸುವುದಿಲ್ಲ. ಆದರೆ ಕ್ಲೋರಿನ್, ಫ್ಲೂರೀನ್, ರಾಜೊಧಕ ಮತ್ತು ಸಯನೈಡ್ ಗಳು ಚಿನ್ನದ ಮೇಲೆ ರಾಸಾಯನಿಕ ಪರಿಣಾಮವುಂಟುಮಾಡುತ್ತವೆ. ಚಿನ್ನವು ಪಾದರಸದಲ್ಲಿ ಕರಗಿ ಕೆಲ ಮಿಶ್ರಧಾತುಗಳನ್ನು ಸೃಷ್ಟಿಸುವುದಾದರೂ ಪಾದರಸದೊಂದಿಗೆ ರಾಸಾಯನಿಕ ಕ್ರಿಯೆ ಉಂಟಾಗುವುದಿಲ್ಲ. ಒಂದಕ್ಕೆ ಮೂರರ ಪ್ರಮಾಣದಲ್ಲಿರುವ ಸಾಂದ್ರ ನೈಟ್ರಿಕ್ ಆಮ್ಲ ಮತ್ತು ಹೈಡ್ರೋಕ್ಲೋರಿಕ್ ಆಮ್ಲಗಳ ಮಿಶ್ರಣದಲ್ಲಿ ಮಾತ್ರ ಚಿನ್ನವು ಕರಗುವುದು. ಈ ದ್ರಾವಣವನ್ನು ಅಕ್ವಾ ರೀಜಿಯ ಎಂದು ಕರೆಯುವರು. ನೈಟ್ರಿಕ್ ಆಮ್ಲದಲ್ಲಿ ಚಿನ್ನವು ಕರಗಲಾರದು. ಈ ಗುಣವನ್ನು ವಸ್ತುಗಳಲ್ಲಿ ಚಿನ್ನದ ಇರುವಿಕೆಯನ್ನು ಕಂಡುಕೊಳ್ಳುವಲ್ಲಿ ಬಳಸಲಾಗುತ್ತದೆ. ಅಲ್ಲದೆ ಸಾಮಾನ್ಯವಾಗಿ ಚಿನ್ನವು ಪ್ರಕೃತಿಯಲ್ಲಿ ಬೆಳ್ಳಿಯೊಡನೆ ಬೆರೆತಿರುವುದರಿಂದಾಗಿ ಚಿನ್ನವನ್ನು ಶುದ್ಧೀಕರಿಸಿ ತೆಗೆಯುವಾಗ ನೈಟ್ರಿಕ್ ಆಮ್ಲದ ದ್ರಾವಣದ ಬಳಕೆಯಾಗುವುದು. ಬೆಳ್ಳಿಯು ನೈಟ್ರಿಕ್ ಆಮ್ಲದಲ್ಲಿ ಕರಗುತ್ತದೆ.

ಚಿನ್ನವು ಅತಿ ಮೃದುಲೋಹ. ಕೇವಲ ಒಂದು ಗ್ರಾಮಿನಷ್ಟು ಚಿನ್ನವನ್ನು ಒಂದು ಚದರ ಮೀಟರ್ ಅಗಲ ಹಾಳೆಯಾಗಿ ಬಡಿಯಬಹುದು. ಅರೆಪಾರದರ್ಶಕವಾಗುವಷ್ಟು ತೆಳು ಹಾಳೆಯಾಗಿ ಚಿನ್ನವನ್ನು ರೂಪಿಸಬಹುದಾಗಿದೆ. ಚಿನ್ನವು ಹಲವು ಲೋಹಗಳೊಂದಿಗೆ ಸುಲಭವಾಗಿ ಬೆರೆತು ಮಿಶ್ರಲೋಹಗಳನ್ನು ಸೃಷ್ಟಿಸುವುದು. ವಿಶಿಷ್ಟ ವರ್ಣದ ವಸ್ತುಗಳನ್ನು ತಯಾರಿಸುವಲ್ಲಿ ಇಂತಹ ಮಿಶ್ರಲೋಹಗಳ ಬಳಕೆಯಾಗುತ್ತದೆ. ಭೂಮಿಯಲ್ಲಿರುವ ಚಿನ್ನವು ಸಾಮಾನ್ಯವಾಗಿ ೮ ರಿಂದ ೧೦% ಬೆಳ್ಳಿಯೊಂದಿಗೆ ಮಿಶ್ರವಾಗಿರುತ್ತದೆ.

ಚಿನ್ನವು ವಿದ್ಯುತ್ ಮತ್ತು ಉಷ್ಣದ ಉತ್ತಮ ವಾಹಕವಾಗಿದೆ. ವಾತಾವರಣದ ಉಷ್ಣತೆ, ತೇವ, ಆಮ್ಲಜನಕ ಮತ್ತು ಇತರ ರಾಸಾಯನಿಕ ಅಂಶಗಳು ಚಿನ್ನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಗುಣಗಳು ಚಿನ್ನವನ್ನು ಆಭರಣ ಮತ್ತು ನಾಣ್ಯಗಳ ತಯಾರಿಕೆಯಲ್ಲಿ ಬಳಸಲು ಅತಿ ಸೂಕ್ತವಾಗಿಸಿವೆ. ಶುದ್ಧ ಚಿನ್ನವು ಯವುದೇ ರುಚಿಯನ್ನು ಹೊಂದಿರುವುದಿಲ್ಲ. ಚಿನ್ನವು ಅತಿ ಸಾಂದ್ರ ಲೋಹವಾಗಿದ್ದು ಒಂದು ಘನ ಮೀಟರ್ ಚಿನ್ನವು ೧೯೩೦೦ ಕಿ.ಗ್ರಾ. ಗಳಷ್ಟು ತೂಗುವುದು. ಇದು ಸೀಸಕ್ಕಿಂತ ಹೆಚ್ಚು ಸಾಂದ್ರತೆಯನ್ನು ಹೊಂದಿದೆ.

ಹಳದಿ ಲೋಹ ಚಿನ್ನ ಮಹಿಳೆಯರ ಅಚ್ಚುಮೆಚ್ಚು
ಚಿನ್ನ ಆಭರಣ ಮತ್ತು ನಾಣ್ಯಗಳ ತಯಾರಿಕೆಯಲ್ಲಿ ಬಳಸಲು ಅತಿ ಸೂಕ್ತ

ಸಾಮಾನ್ಯವಾಗಿ ಅಲ್ಪಪ್ರಮಾಣದ ಚಿನ್ನದ ಸೇವನೆಯು ಶರೀರಕ್ಕೆ ಯಾವುದೇ ಹಾನಿಯುಂಟುಮಾಡುವುದಿಲ್ಲ. ಕೆಲವೊಮ್ಮೆ ಆಹಾರದಲ್ಲಿ ಮತ್ತು ಔಷಧಿಗಳಲ್ಲಿ ಅಲ್ಪಪ್ರಮಾಣದ ಚಿನ್ನವನ್ನು ಬಳಸಲಾಗುತ್ತದೆ. ಆದರೆ ಹೆಚ್ಚಿನ ಪ್ರಮಾಣದ ಚಿನ್ನದ ಸೇವನೆಯು ಇತರ ಭಾರಲೋಹಗಳಂತೆ ಶರೀರಕ್ಕೆ ವಿಷಕಾರಿಯಾಗುವುದೆಂದು ಹೇಳಲಾಗುತ್ತದೆ.

ಇತಿಹಾಸ ಪೂರ್ವಕಾಲದಿಂದಲೂ ಮಾನವನಿಗೆ ಚಿನ್ನವು ಬಹುಮೂಲ್ಯ ವಸ್ತುವೆಂದು ತಿಳಿದಿತ್ತು. ಪ್ರಾಚೀನ ಈಜಿಪ್ಟ್ ಮತ್ತು ನುಬಿಯಾಗಳು ಭಾರೀ ಪ್ರಮಾಣದಲ್ಲಿ ಚಿನ್ನದ ನಿಕ್ಷೇಪವನ್ನು ಹೊಂದಿದ್ದುವು. ಪ್ರಾಚೀನ ಈಜಿಪ್ಟಿನಲ್ಲಿ ಧಾರ್ಮಿಕ ಕ್ರಿಯೆಗಳಲ್ಲಿ ಮತ್ತು ಅಂತ್ಯಸಂಸ್ಕಾರಗಳಲ್ಲಿ ಚಿನ್ನದ ವಿಪುಲ ಬಳಕೆಯಾಗುತ್ತಿತ್ತು. ಅಲ್ಲದೆ ಕಪ್ಪು ಸಮುದ್ರದ ಆಗ್ನೇಯ ಭಾಗವು ತನ್ನ ಚಿನ್ನಕ್ಕಾಗಿ ಹೆಸರಾಗಿತ್ತು. ಲಿಡಿಯಾದಲ್ಲಿ ಕ್ರಿ. ಪೂ. ೬೪೩ ರಿಂದ ೬೩೦ ರ ಮಧ್ಯೆ ಜಗತ್ತಿನಲ್ಲಿ ಪ್ರಪ್ರಥಮ ಬಾರಿಗೆ ಸುವರ್ಣ ನಾಣ್ಯಗಳನ್ನು ಟಂಕಿಸಲಾಯಿತೆಂದು ಊಹಿಸಲಾಗಿದೆ.

ಆಫ್ರಿಕಾದ ಮಾಲಿ ಸಾಮ್ರಾಜ್ಯವು ತನ್ನ ಅಪಾರ ಪ್ರಮಾಣದ ಚಿನ್ನಕ್ಕೆ ಹೆಸರಾಗಿತ್ತು. ಮಾಲಿಯ ಸಮ್ರಾಟ ಮನ್ಸ ಮೂಸಾ ಒಮ್ಮೆ ಹಜ್ ಯಾತ್ರೆ ಕೈಗೊಂಡಾಗ ದಾರಿಯಲ್ಲಿ ಅಗಾಧ ಪ್ರಮಾಣದ ಚಿನ್ನವನ್ನು ಬಡಬಗ್ಗರಿಗೆ ಹಂಚಿದನು. ಇದರಿಂದಾಗಿ ಉತ್ತರ ಆಫ್ರಿಕಾದಲ್ಲಿ ಹಠಾತ್ ಹಣದುಬ್ಬರ ಕಾಣಿಸಿಕೊಂಡಿತ್ತು.

ಅಮೆರಿಕಾದ ಮೂಲನಿವಾಸಿಗಳು ತಮ್ಮಲ್ಲಿಗೆ ಆಗಮಿಸಿದ ಯುರೋಪಿನ ಸಂಶೋಧಕರಿಗೆ ತಮ್ಮಲ್ಲಿ ಸಮೃದ್ಧಿಯಾಗಿದ್ದ ಚಿನ್ನಾಭರಣಗಳನ್ನು ತೋರಿಸಿದುದು ಯುರೋಪಿಯನ್ನರನ್ನು ಅಮೇರಿಕಾದತ್ತ ಸೆಳೆಯಿತೆಂದು ಇತಿಹಾಸ ಹೇಳುತ್ತದೆ. ಮುಖ್ಯವಾಗಿ ಅಂದು ಪೆರು, ಮಧ್ಯ ಅಮೆರಿಕಾ ಮತ್ತು ಕೊಲೊಂಬಿಯಾ ಪ್ರದೇಶಗಳಲ್ಲಿ ಚಿನ್ನದ ಅಪಾರ ರಾಶಿಯಿದ್ದಿತ್ತು.

ಅಂದಿನ ದಿನಗಳಲ್ಲಿ ಚಿನ್ನವನ್ನು ಭೂಮಿಯಿಂದ ಪಡೆಯುವುದು ಸುಲಭವಾಗಿತ್ತು. ಆದರೆ ಇದುವರೆಗೆ ವಿಶ್ವದಲ್ಲಿ ಉತ್ಪಾದನೆಯಾದ ಒಟ್ಟೂ ಚಿನ್ನದ ೭೫% ಭಾಗ ೧೯೧೦ರ ನಂತರವೇ ಆಗಿದೆ. ಒಂದು ಅಂದಾಜಿನ ಪ್ರಕಾರ ಇದುವರೆಗೆ ಶುದ್ಧೀಕರಿಸಿ ತೆಗೆಯಲಾದ ಎಲ್ಲಾ ಚಿನ್ನವನ್ನು ಒಟ್ಟುಗೂಡಿಸಿದರೆ ಅದು ೨೦ ಮೀಟರ್ ಅಳತೆಯ ಘನಾಕೃತಿಯಾಗುವುದು.

ಚಿನ್ನದ ಮೌಲ್ಯ ಮತ್ತು ಅದರ ಮೇಲಿನ ಮಾನವನ ವ್ಯಾಮೋಹವು ರಸವಿದ್ಯೆಯೆಂಬ ಶಾಸ್ತ್ರವನ್ನು ಹುಟ್ಟುಹಾಕಿದವು. ರಸವಿದ್ಯೆಯ ಮೂಲ ಗುರಿ ಸೀಸದಂತಹ ಅಗ್ಗದ ಲೋಹಗಳನ್ನು ಚಿನ್ನವನ್ನಾಗಿ ಪರಿವರ್ತಿಸುವುದು. ಆದರೆ ಯಾರೂ ಇದರಲ್ಲಿ ಯಶ ಸಾಧಿಸಲಿಲ್ಲ. ಆದರೆ ಇದಕ್ಕಾಗಿ ನಡೆಸಲಾದ ನಾನಾ ರಾಸಾಯನಿಕ ಪ್ರಯೋಗಗಳು ಆಧುನಿಕ ರಸಾಯನ ಶಾಸ್ತ್ರಕ್ಕೆ ಉತ್ತಮ ತಳಹದಿ ಹಾಕಿಕೊಟ್ಟುವು. ಪ್ರಾಚೀನ ಕಾಲದಿಂದ ಇಲ್ಲಿಯವರೆಗೆ ಉತ್ಪಾದಿಸಲಾದ ಚಿನ್ನವೆಲ್ಲಾ ಹೆಚ್ಚೂಕಡಿಮೆ ಇಂದು ಸಹ ಒಂದಲ್ಲ ಒಂದು ರೂಪದಲ್ಲಿ ಚಲಾವಣೆಯಲ್ಲಿದೆ.

ಲೋಹರೂಪದಲ್ಲಿ ಚಿನ್ನದ ಬಳಕೆ

ಹಣಕಾಸಿನ ವಿನಿಮಯದ ಮಾಧ್ಯಮವಾಗಿ ಚಿನ್ನವು ಬಳಸಲ್ಪಡುತ್ತಿದೆ. ವಿಶ್ವದ ಹೆಚ್ಚಿನ ರಾಷ್ಟ್ರಗಳು ಚಿನ್ನವನ್ನೇ ಆರ್ಥಿಕ ಪ್ರಮಾಣವನ್ನಾಗಿ ಮಾನ್ಯ ಮಾಡಿವೆ. ಚಿನ್ನವು ಆಭರಣಗಳಲ್ಲಿ ಮತ್ತು ನಾಣ್ಯಗಳಲ್ಲಿ ಬಳಕೆಯಾಗುತ್ತಿದೆ. ಶುದ್ಧ ಚಿನ್ನವು ಅತಿ ಮೃದುವಾದುದರಿಂದ ಸಾಮಾನ್ಯವಾಗಿ ತಾಮ್ರ, ಬೆಳ್ಳಿ ಅಥವಾ ಇತರ ಮೂಲಲೋಹಗಳ ಮಿಶ್ರಣವಾಗಿ ಬಳಸಲ್ಪಡುವುದು. ಮಿಶ್ರಲೋಹಗಳಲ್ಲಿರುವ ಚಿನ್ನದ ಪ್ರಮಾಣವನ್ನು ಕ್ಯಾರಟ್ ಗಳಲ್ಲಿ ಅಳೆಯಲಾಗುತ್ತದೆ. ಅತ್ಯಂತ ಶುದ್ಧ ಚಿನ್ನವು ೨೪ ಕ್ಯಾರಟ್ ಎಂದು ಪರಿಗಣಿಸಲ್ಪಡುತ್ತದೆ.

ಹಳದಿ ಲೋಹ ಚಿನ್ನ ಮಹಿಳೆಯರ ಅಚ್ಚುಮೆಚ್ಚು
ಶುದ್ಧ ಚಿನ್ನ

ಚಿನ್ನವು ಬಲು ಮೃದುವಾಗಿರುವುದರಿಂದ ಆಭರಣಗಳ ತಯಾರಿಕೆಯಲ್ಲಿ ಅದನ್ನು ತಾಮ್ರ ಅಥವಾ ಬೆಳ್ಳಿಯೊಂದಿಗೆ ಮಿಶ್ರವಾಗಿ ಬಳಸುವರು. ಹೀಗೆ ಮಿಶ್ರಣ ಮಾಡುವುದರಿಂದ ಚಿನ್ನದ ಗಡಸುತನ, ಕರಗುವ ಉಷ್ಣತೆ, ಬಣ್ಣ ಮಾರ್ಪಡುತ್ತದೆ. ಆಭರಣಗಳಲ್ಲಿ ಅತಿ ಹೆಚ್ಚಾಗಿ ಬಳಸುವ ಚಿನ್ನದ ಮಿಶ್ರಧಾತು ೨೨ ಕ್ಯಾರಟ್ ನದು. ಇದರಲ್ಲಿ ೨೨ ಭಾಗ ಚಿನ್ನ ಮತ್ತು ೨ ಭಾಗ ತಾಮ್ರಗಳು ಇರುವುವು. ತಾಮ್ರದ ಮಿಶ್ರಣದಿಂದ ಚಿನ್ನದ ಬಣ್ಣವು ಕೊಂಚ ಕೆಂಪಾಗುತ್ತದೆ. ಬಿಳಿಯತ್ತ ತಿರುಗಿರುವ ಚಿನ್ನದ ಮಿಶ್ರಲೋಹಗಳಲ್ಲಿ ಬೆಳ್ಳಿ, ಪಲಾಡಿಯಮ್ ಅಥವಾ ನಿಕ್ಕೆಲ್ ಗಳನ್ನು ಬಳಸುವರು.

ಮಧ್ಯಕಾಲದಲ್ಲಿ ಚಿನ್ನವು ಮಾನವನ ಆರೋಗ್ಯವರ್ಧಕವೆಂದು ಪರಿಗಣಿಸಲಾಗಿತ್ತು. ಇಂದು ಸಹ ಕೆಲ ವೈದ್ಯಕೀಯ ಪದ್ಧತಿಗಳು ಚಿನ್ನವನ್ನು ಔಷಧಿಯ ರೂಪದಲ್ಲಿ ಬಳಸುತ್ತವೆ. ಚಿನ್ನದ ಕೆಲವು ಲವಣಗಳು ಸಂಧಿವಾತದಂತಹ ಖಾಯಿಲೆಗಳ ಉಪಶಮನಕ್ಕಾಗಿ ಬಳಸಲ್ಪಡುವುವು. ಆದರೆ ಶುದ್ಧ ಚಿನ್ನವು ಶರೀರದೊಳಗಿನ ಎಲ್ಲ ರಾಸಾಯನಿಕ ಕ್ರಿಯೆಗಳಿಗೂ ಜಡವಾಗಿರುವುದರಿಂದ ಶುದ್ಧ ಚಿನ್ನದ ನೇರ ಸೇವನೆ ಯಾವುದೇ ಪ್ರಯೋಜನ ನೀಡಲಾರದು.
ಚಿನ್ನದ ಎಲೆ, ರೇಕು ಅಥವಾ ಧೂಳನ್ನು ಕೆಲ ಸಿಹಿಪದಾರ್ಥಗಳು ಮತ್ತು ಪಾನೀಯಗಳಲ್ಲಿ ಅಲಂಕಾರಿಕವಾಗಿ ಉಪಯೋಗಿಸಲಾಗುತ್ತದೆ. ಇದು ಮಧ್ಯಕಾಲದಿಂದ ನಡೆದು ಬಂದ ಪರಂಪರೆ. ಅಂದು ಆತಿಥೇಯನು ತನ್ನ ಸಿರಿಯ ಪ್ರದರ್ಶನಕ್ಕಾಗಿ ಅಥವಾ ಬಲು ಬೆಲೆಬಾಳುವ ವಸ್ತು ಆರೋಗ್ಯಕ್ಕೆ ಸಹ ಒಳ್ಳೆಯದನ್ನು ಮಾಡುವುದೆಂಬ ನಂಬಿಕೆಯಿಂದ ಆಹಾರ ಮತ್ತು ಪಾನೀಯಗಳಲ್ಲಿ ಚಿನ್ನವನ್ನು ಸೇರಿಸುತ್ತಿದ್ದನು.

ಆಭರಣಗಳ ತಯಾರಿಕೆಯಲ್ಲಿ ಚಿನ್ನವನ್ನು ಬೆಸುಗೆಯ ಲೋಹವನ್ನಾಗಿ ಉಪಯೋಗಿಸುವರು. ಆಭರಣವು ಅತ್ಯುತ್ತಮ ದರ್ಜೆಯದಾಗಿರಬೇಕಾದರೆ ಬೆಸುಗೆಗೆ ಬಳಸುವ ಚಿನ್ನವು ಆಭರಣದ ಚಿನ್ನದಷ್ಟೇ ಶುದ್ಧವಾಗಿರಬೇಕಾಗಿರುತ್ತದೆ.

ದಂತವೈದ್ಯದಲ್ಲಿ ಈಚೆಗೆ ಚಿನ್ನವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಹಲ್ಲುಕುಳಿಗಳನ್ನು ಮುಚ್ಚಲು ಅಥವಾ ಹೊಸ ಹಲ್ಲುಗಳನ್ನು ಕಟ್ಟಲು ಚಿನ್ನದ ಉಪಯೋಗವಾಗುತ್ತಿದೆ. ತನ್ನ ಕೆಲ ವಿಶಿಷ್ಟ ಭೌತಿಕ ಗುಣಗಳಿಂದಾಗಿ ಚಿನ್ನದ ಹಲ್ಲು ಸಹಜ ಹಲ್ಲುಗಳೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಇದರಿಂದಾಗಿ ದವಡೆಯ ಹಲ್ಲುಗಳನ್ನು ಚಿನ್ನದಲ್ಲಿ ತಯಾರಿಸುವ ಕ್ರಮ ಚಾಲ್ತಿಯಲ್ಲಿದೆ.

ಚಿನ್ನದವನ್ನು ನೂಲಾಗಿ ಎಳೆದು ಕಸೂತಿಯಲ್ಲಿ ಉಪಯೋಗಿಸುವರು.

ಕೆಲ ದುಬಾರಿ ಗಾಜುಗಳ ನಿರ್ಮಾಣದಲ್ಲಿ ದಟ್ಟ ಕೆಂಪು ಬಣ್ಣವನ್ನು ತರಲು ಚಿನ್ನದ ಬಳಕೆಯಾಗುತ್ತದೆ.

ಕೆಲ ವಿಶಿಷ್ಟ ಛಾಯಾಗ್ರಹಣದಲ್ಲಿ ಚಿನ್ನದ ಟೋನರ್ ಗಳನ್ನು ಬಳಸಲಾಗುವುದು. ಛಾಯಾಚಿತ್ರವನ್ನು ಮುದ್ರಿಸುವ ಹಂತದಲ್ಲಿ ಈ ಟೋನರ್ ಗಳ ಬಳಕೆಯಿಂದ ಬಣ್ಣಗಳ ಮಾರ್ಪಾಡು ಮತ್ತು ಸ್ಥಿರತೆಯನ್ನು ಸಾಧಿಸಬಹುದಾಗಿದೆ.

ಚಿನ್ನವು ವಿದ್ಯುತ್ತಿನ ಅತ್ಯುತ್ತಮ ವಾಹಕ ಮತ್ತು ಸಾಮಾನ್ಯವಾಗಿ ಹೆಚ್ಚಿನ ರಾಸಾಯನಿಕ ಕ್ರಿಯೆಗಳಿಗೆ ಜಡವಾಗಿರುವುದರಿಂದ ವಿದ್ಯುನ್ಮಾನ ಉಪಕರಣಗಳಲ್ಲಿ ಚಿನ್ನದ ಉಪಯೋಗ ಸಾಕಷ್ಟಿದೆ. ಉತ್ತಮ ದರ್ಜೆಯ ಪಿ.ಸಿ.ಬಿ. , ಮತ್ತು ಕನೆಕ್ಟರ್ ಗಳಲ್ಲಿ ಅಂಚಿನ ಪಿನ್ ಗಳಿಗೆ ಚಿನ್ನದ ಲೇಪನವಿರುತ್ತದೆ.

ಚಿನ್ನವು ಕಣ್ಣಿಗೆ ಕಾಣುವ ಬೆಳಕಿನ ಕಿರಣಗಳು ಮತ್ತು ಅವಗೆಂಪು ಕಿರಣಗಳನ್ನು ಉತ್ತಮವಾಗಿ ಪ್ರತಿಫಲಿಸುವುದರಿಂದ ಅದನ್ನು ಕೃತಕ ಉಪಗ್ರಹಗಳ ಹೊದಿಕೆಗೆ ಲೇಪಿಸಲು ಬಳಸುತ್ತಾರೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕಮಲ ದೇವಾಲಯ ವಿಶೇಷತೆ

ಕಮಲ ದೇವಾಲಯ ವಿಶೇಷತೆ

ಬಾಲ್ಯದ ಸ್ಥೂಲಕಾಯ

ಬಾಲ್ಯದ ಸ್ಥೂಲಕಾಯ