in

ದೈತ್ಯ ಜೀವಿ ಆನೆ

ದೈತ್ಯ ಜೀವಿ ಆನೆ
ದೈತ್ಯ ಜೀವಿ ಆನೆ

ಪ್ರಾಣಿ ಶಾಸ್ತ್ರದ ಪ್ರಕಾರ ಆನೆ ಸಸ್ತನಿಗಳ ವರ್ಗದಲ್ಲಿ ಪ್ರೊಬೊಸಿಡಿಯ ಉಪವರ್ಗದ ಒಂದು ಕುಟುಂಬ. ಹಿಂದೆ ಇವುಗಳನ್ನು ಪಾಚಿಡರ್ಮಾಟಾ ಎಂಬ ದಪ್ಪಚರ್ಮದ ಪ್ರಾಣಿಗಳ ಉಪವರ್ಗದಲ್ಲಿರಿಸಲಾಗಿತ್ತು. ಇಂದು ಮೂರು ತಳಿಗಳ ಆನೆಗಳು ಭೂಮಿಯ ಮೇಲೆ ಇವೆ. ಅವೆಂದರೆ ಆಫ್ರಿಕದ ಪೊದೆಗಳ ಆನೆ, ಆಫ್ರಿಕದ ಅರಣ್ಯದ ಆನೆ ಮತ್ತು ಏಷ್ಯಾದ ಆನೆ. ಇವುಗಳಲ್ಲಿ ಮೊದಲೆರಡನ್ನು ಒಟ್ಟಾಗಿ ಆಫ್ರಿಕನ್ ಆನೆ ಎಂದು ಸಹ ಕರೆಯುವುದು ವಾಡಿಕೆ. ಏಷ್ಯಾದ ಆನೆಯನ್ನು ಭಾರತದ ಆನೆ ಎಂದು ಸಹ ಕರೆಯಲಾಗುತ್ತದೆ. ಸುಮಾರು ೧೦,೦೦೦ ವರ್ಷಗಳ ಹಿಂದೆ ಕೊನೆಗೊಂಡ ಹಿಮಯುಗದೊಂದಿಗೆ ಉಳಿದ ತಳಿಗಳ ಆನೆಗಳು ಭೂಮಿಯಿಂದ ಶಾಶ್ವತವಾಗಿ ಮರೆಯಾದುವು.

ಮ್ಯಾಮತ್, ದೈತ್ಯ ಆನೆ ಬಲು ಪ್ರಸಿದ್ಧ. ಆನೆ ಜಗತ್ತಿನಲ್ಲಿ ನೆಲದ ಮೇಲೆ ವಾಸಿಸುವ ಪ್ರಾಣಿಗಳಲ್ಲಿ ಅತಿ ದೊಡ್ಡದು. ಅಲ್ಲದೆ ನೆಲದ ಮೇಲಿನ ಪ್ರಾಣಿಗಳಲ್ಲಿ ಆನೆಯ ಗರ್ಭಾವಸ್ಥೆಯ ಕಾಲ ೨೨ ತಿಂಗಳುಗಳು ಎಲ್ಲಕ್ಕಿಂತ ದೀರ್ಘ. ಹುಟ್ಟಿದಾಗ ಆನೆಯ ಮರಿಯು ೧೨೦ ಕಿ.ಗ್ರಾಂ.ವರೆಗೆ ತೂಗುವುದಿದೆ. ಸುಮಾರು ೭೦ ವರ್ಷಗಳ ಕಾಲ ಆನೆಯು ಜೀವಿಸಬಲ್ಲುದು. ೧೯೫೬ರಲ್ಲಿ ಅಂಗೋಲದಲ್ಲಿ ಕೊಲ್ಲಲಾದ ಆನೆಯೊಂದರ ತೂಕವು ೧೨೦೦೦ ಕಿ.ಗ್ರಾಂ.ಗಳಷ್ಟಿದ್ದಿತು. ಈ ಬೃಹತ್ ಆನೆಯು ಭುಜದವರೆಗೆ ೧೩.೮ ಅಡಿ ಎತ್ತರವಾಗಿತ್ತು. ಇದು ಆಫ್ರಿಕಾದ ಆನೆಗಳ ಸರಾಸರಿ ಎತ್ತರಕ್ಕಿಂತ ಒಂದು ಮೀ. ಹೆಚ್ಚಾಗಿದ್ದಿತು. ಇದುವರೆಗೆ ದೊರೆತಿರುವ ಪಳೆಯುಳಿಕೆಗಳ ಅಧ್ಯಯನದ ಪ್ರಕಾರ ಅತಿ ಚಿಕ್ಕ ಗಾತ್ರದ ಆನೆಯು ಕೇವಲ ಒಂದು ಕರು ಅಥವ ದೊಡ್ಡ ಹಂದಿಯ ಗಾತ್ರದಲ್ಲಿದ್ದು ಇತಿಹಾಸಪೂರ್ವಕಾಲದಲ್ಲಿ ಕ್ರೀಟ್ ದ್ವೀಪದಲ್ಲಿ ನೆಲೆಸಿದ್ದುವು. ಆನೆಯು ಇಂದು ಅಳಿವಿನತ್ತ ಸಾಗಿರುವ ಜೀವಿ. ತನ್ನ ನೆಲೆಯ ಮೇಲೆ ಮಾನವನ ಅತಿಕ್ರಮಣ ಮತ್ತು ದಂತಕ್ಕಾಗಿ ನಿರಂತರವಾಗಿ ಸಾಗಿರುವ ಹತ್ಯೆಗಳೆ ಇದಕ್ಕೆ ಕಾರಣ. ಒಂದೊಮ್ಮೆ ಹಲವು ದಶಲಕ್ಷಗಳಷ್ಟಿದ್ದ ಆಫ್ರಿಕನ್ ಆನೆಗಳ ಸಂಖ್ಯೆ ಇಂದು ೪೭೦,೦೦೦ದಿಂದ ೬೯೦,೦೦೦ ಕ್ಕೆ ಇಳಿದಿದೆ. ವಿಶ್ವದೆಲ್ಲೆಡೆ ಇಂದು ಆನೆಯನ್ನು ಸಂರಕ್ಷಿತ ಜೀವಿಯನ್ನಾಗಿ ಕಾಪಾಡಿಕೊಳ್ಳಲಾಗುತ್ತಿದೆ. ಆನೆಗಳನ್ನು ಹಿಡಿಯುವುದು, ಪಳಗಿಸುವುದು, ದಂತವ್ಯಾಪಾರ ಇತ್ಯಾದಿಗಳ ಮೇಲೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಸಾಮಾನ್ಯವಾಗಿ ಆನೆಗಳು ಇತರ ಪ್ರಾಣಿಗಳಿಂದ ಬೇಟೆಯಾಡಲ್ಪಡುವುದಿಲ್ಲ. ಆದರೆ ಕೆಲವು ಪ್ರದೇಶಗಳಲ್ಲಿ ಸಿಂಹಗಳು ಮರಿ ಆನೆಗಳನ್ನು ಬೇಟೆಯಾಡುವ ಸಂದರ್ಭಗಳೂ ಇವೆ. ಆನೆ ಈಗ ಭಾರತದ ಪಾರಂಪರಿಕ ಪ್ರಾಣಿ. ಆನೆ ಕಾರ್ಯಾಚರಣೆ ಪಡೆ ನೀಡಿದ “ಗಜ”ವರದಿಯ ಆಧಾರದಲ್ಲಿ ೨೦೧೦ ಅಕ್ಟೋಬರ್ ನಲ್ಲಿ ಕೇಂದ್ರ ಸರಕಾರ ಈ ಘೋಷಣೆ ಮಾಡಿದೆ. ೧೯೯೨ರಲ್ಲಿ ಶುರುವಾದ “ಪ್ರಾಜೆಕ್ಟ್ ಎಲಿಫೆಂಟ್ ” ಯೋಜನೆಗೆ ಚುರುಕು ನೀಡಲು ೨೦೧೦ ಮಾರ್ಚ್ ನಲ್ಲಿ ಪರಿಸರ ಸಚಿವಾಲಯ “ಎಲಿಫೆನ್ಟ್ ಟಾಸ್ಕ್ ಪೋರ್ಸ್”ರಚನೆ ಮಾಡಿತ್ತು. ಭಾರತದಲ್ಲಿ ೨೮,೦೦೦ ದಷ್ಟು ಆನೆಗಳಿವೆ

ದೈತ್ಯ ಜೀವಿ ಆನೆ
ಆಫ್ರಿಕನ್ ಆನೆ

ಆಫ್ರಿಕನ್ ಆನೆಯ ವರ್ಗದಲ್ಲಿ ಎರಡು ತಳಿಗಳು ಇಂದು ಜೀವಿಸಿವೆ. ಏಷ್ಯಾದ ಆನೆಯ ಒಂದು ತಳಿ ಮಾತ್ರ ಇಂದು ನಮ್ಮೊಡನಿದೆ. ಆದರೆ ಏಷ್ಯಾದ ಆನೆಯನ್ನು ಮತ್ತೆ ಮೂರು ಉಪತಳಿಗಳಾಗಿ ವಿಂಗಡಿಸಬಹುದು. ಆಫ್ರಿಕನ್ ಆನೆಯು ಸರಾಸರಿ ೪ ಮೀಟರ್‍ನಷ್ಟು ೧೩ ಅಡಿ ೧ ಅಂಗುಲ ಎತ್ತರವಾಗಿದ್ದು ಸುಮಾರು ೭೫೦೦ ಕಿಲೋಗ್ರಾಂ ತೂಗುವುದು. ಅಲ್ಲದೆ ಆಫ್ರಿಕನ್ ಆನೆಯು ಏಷ್ಯಾದ ಆನೆಗಿಂತ ದೊಡ್ಡ ಗಾತ್ರದ್ದಾಗಿರುತ್ತದೆ ಮತ್ತು ಇದರ ಕಿವಿಗಳು ಸಹ ದೊಡ್ಡವು. ಆಫ್ರಿಕಾದ ಆನೆಗಳಲ್ಲಿ ಗಂಡಾನೆ ಮತ್ತು ಹೆಣ್ಣಾನೆಗಳೆರಡೂ ದೊಡ್ಡ ಗಾತ್ರದ ದಂತಗಳನ್ನು ಹೊಂದಿರುತ್ತವೆ. ಆದರೆ ಏಷ್ಯಾದ ಗಂಡಾನೆಯ ದಂತದ ಗಾತ್ರ ಹೋಲಿಕೆಯಲ್ಲಿ ಚಿಕ್ಕದು ಮತ್ತು ಹೆಣ್ಣಾನೆಯ ದಂತವು ಇಲ್ಲವೇ ಇಲ್ಲವೆನಿಸುವಷ್ಟು ಸಣ್ಣದು. ಆಫ್ರಿಕನ್ ಆನೆಯ ಬೆನ್ನು ಹಿಮ್ಮುಖವಾಗಿ ಇಳಿಜಾರಾಗಿದ್ದು ಹಣೆಯು ಮಟ್ಟಸವಾಗಿರುವುದಲ್ಲದೆ ಸೊಂಡಿಲಿನ ತುದಿಯಲ್ಲಿ ಎರಡು ಬೆರಳುಗಳ ರಚನೆ ಕಾಣುವುದು. ಏಷ್ಯಾದ ಆನೆಯ ಬೆನ್ನು ಬಾಗಿರುವುದು. ಹಣೆಯ ಮೇಲೆ ಎರಡು ಸಣ್ಣ ಡುಬ್ಬಗಳು ಇರುವುವು. ಸೊಂಡಿಲಿನ ತುದಿಯಲ್ಲಿ ಒಂದು ಬೆರಳು ಮಾತ್ರ ಇರುತ್ತದೆ. ಆಫ್ರಿಕನ್ ಆನೆಗಳನ್ನು ಮತ್ತೂ ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಅವೆಂದರೆ ಸವಾನ್ನಾ ಆನೆಗಳು ಮತ್ತು ಕಾಡಿನ ಆನೆಗಳು

ಆಫ್ರಿಕನ್ ಆನೆಯು ವೈಜ್ಞಾನಿಕ ಹೆಸರು : ಲೊಕ್ಸೊಡಾಂಟ ಆಫ್ರಿಕಾನಾ ಆಫ್ರಿಕಾ ಖಂಡದ ೩೭ ರಾಷ್ಟ್ರಗಳಲ್ಲಿ ಇಂದು ಕಂಡುಬರುತ್ತದೆ. ಇವುಗಳಲ್ಲಿ ಸವಾನ್ನಾದ ಆನೆಯು ವಿಶ್ವದ ಅತಿ ದೊಡ್ಡ ಗಾತ್ರದ ಆನೆ ಮತ್ತು ನೆಲದ ಮೇಲೆ ಜೀವಿಸುವ ಪ್ರಾಣಿಗಳಲ್ಲಿ ಅತ್ಯಂತ ದೊಡ್ಡದು. ಗಂಡಾನೆಯ ಸರಾಸರಿ ಎತ್ತರ ೧೦ ಅಡಿ. ಮತ್ತು ತೂಕ ಸುಮಾರು ೭೦೦೦ ಕಿಲೋಗ್ರಾಂ. ಕೆಲವೊಮ್ಮೆ ಗಂಡಾನೆಯು ೧೩ ಅಡಿಗಳಷ್ಟು ಎತ್ತರ ಇರುವುದೂ ಉಂಟು. ಹೆಣ್ಣಾನೆಗಳು ಗಂಡಿಗಿಂತ ತುಂಬಾ ಚಿಕ್ಕ ಗಾತ್ರದವು. ಸವಾನ್ನಾ ಆನೆಗಳು ಸಾಮಾನ್ಯವಾಗಿ ಬಯಲುಮಾಳ, ಜೌಗು ಪ್ರದೇಶ ಮತ್ತು ಸರೋವರಗಳ ತೀರದಲ್ಲಿ ಹಿಂಡಿನಲ್ಲಿ ಜೀವಿಸುತ್ತವೆ. ಸಹಾರಾ ಮರುಭೂಮಿಯ ದಕ್ಷಿಣಕ್ಕಿರುವ ಸವಾನ್ನಾ ಹುಲ್ಲುಗಾವಲು ಪ್ರದೇಶದಲ್ಲಿ ಇವು ವ್ಯಾಪಕವಾಗಿ ಕಾಣಬರುವುವು. ಕಾಡಿನ ಆನೆಗಳು ಲೊಕ್ಸೊಡೋಂಟಾ ಸೈಕ್ಲೋಟಿಸ್ ಆಫ್ರಿಕನ್ ಆನೆಯ ಇನ್ನೊಂದು ತಳಿ. ಸವಾನ್ನಾ ಅನೆಗಳಿಗಿಂತ ಇವುಗಳ ಕಿವಿಗಳು ಚಿಕ್ಕದಾಗಿರುತ್ತವೆ. ಅಲ್ಲದೆ ಇವುಗಳ ದಂತವು ತೆಳುವಾಗಿ ನೇರವಾಗಿ ಇರುವುದಲ್ಲದೆ ಹೊರಬಾಗುವಿಕೆಯು ಸಹ ಕಡಿಮೆ ಇರುತ್ತದೆ. ೧೦ ಅಡಿಗಳಷ್ಟು ಎತ್ತರಕ್ಕೆ ಬೆಳೆಯಬಲ್ಲ ಈ ಕಾಡಿನೆ ಆನೆಯು ೪೫೦೦ ಕಿಲೋಗ್ರಾಂವರೆಗೆ ತೂಗುವುದು. ಹೊರಗಿನ ಪ್ರಪಂಚಕ್ಕೆ ಸುಲಭವಾಗಿ ಕಾಣಿಸಿಕೊಳ್ಳುವ ಸವಾನ್ನಾ ಅನೆಗಳ ಬಗ್ಗೆ ತಿಳಿದಿರುವಷ್ಟು ವಿಷಯಗಳು ಕಾಡಿನ ಆನೆಗಳ ಬಗ್ಗೆ ತಿಳಿದಿಲ್ಲ. ಪರಿಸರ ರಕ್ಷಣಾ ಕಾಯಿದೆಗಳು ಮತ್ತು ರಾಜಕೀಯ ಅಡೆತಡೆಗಳಿಂದಾಗಿ ಕಾಡಾನೆಗಳ ಅಧ್ಯಯನ ಬಹಳ ಪ್ರಗತಿ ಕಂಡಿಲ್ಲ. ಸಾಮಾನ್ಯವಾಗಿ ಕಾಡಿನ ಆನೆಗಳು ಪಶ್ಚಿಮ ಮತ್ತು ಮಧ್ಯ ಆಫ್ರಿಕಾದ ದಟ್ಟ ಮಳೆಕಾಡುಗಳಲ್ಲಿ ಜೀವಿಸುತ್ತವೆ. ಅಪರೂಪವಾಗಿ ಕಾಡಿನ ಅಂಚಿಗೆ ಬಂದು ಬಯಲಿನ ಸವಾನ್ನಾ ಆನೆಗಳೊಂದಿಗೆ ಸೇರಿ ಸಂತಾನೋತ್ಪತ್ತಿ ನಡೆಸುವುದೂ ಉಂಟು. ೧೯೭೯ರಲ್ಲಿ ಇಯನ್ ಡಗ್ಲಾಸ್ ಹ್ಯಾಮಿಲ್ಟನ್ ಎಂಬಾತನು ಇವುಗಳ ಒಟ್ಟು ಸಂಖ್ಯೆ ಸುಮಾರು ೧೩ ಲಕ್ಷದಷ್ಟು ಎಂದು ಅಂದಾಜು ಮಾಡಿದನು. ಈ ಅಂದಾಜು ವಿವಾದಾಸ್ಪದವಾಗಿದ್ದು ಉತ್ಪ್ರೇಕ್ಷಿತ ಸಂಖ್ಯೆಯೆನಿಸಿದರೂ ಸಾಮಾನ್ಯವಾಗಿ ಇದನ್ನೇ ಅಧಿಕೃತವೆಂದು ಸ್ವೀಕರಿಸಲಾಗಿದೆ. ೮೦ರ ದಶಕದಲ್ಲಿ ಪೂರ್ವ ಆಫ್ರಿಕಾದಲ್ಲಿ ಅತಿಯಾಗಿ ಹೆಚ್ಚಿದ ಆನೆಗಳ ಕಳ್ಳಬೇಟೆಯಿಂದಾಗಿ ಆನೆಯ ಸಂತತಿಗೆ ದೊಡ್ಡ ವಿಪತ್ತುಂಟಾಗಿ ವಿಶ್ವದ ಗಮನ ಸೆಳೆಯಿತು. ಇಂದು ಸುಮಾರು ೪೭೦೦೦೦ದಿಂದ ೬೯೦೦೦೦ರಷ್ಟು ಆನೆಗಳು ಆಫ್ರಿಕಾದಲ್ಲಿ ಇವೆಯೆಂದು ೨೦೦೭ರ ವರದಿಯೊಂದು ತಿಳಿಸುತ್ತದೆ. ಈ ಗಣತಿಯಲ್ಲಿ ಸಾಮಾನ್ಯವಾಗಿ ಆನೆಗಳು ವಾಸಿಸುವ ಪ್ರದೇಶದ ಅರ್ಧಭಾಗವನ್ನು ಮಾತ್ರ ಪರಿಗಣಿಸಲಾಗಿತ್ತು. ಆದರೆ ತಜ್ಞರ ಪ್ರಕಾರ ಆನೆಗಳ ನಿಜವಾದ ಸಂಖ್ಯೆ ಇದಕ್ಕಿಂತ ಬಲು ಹೆಚ್ಚಾಗಿರಲು ಸಾಧ್ಯವಿಲ್ಲ. ಆಫ್ರಿಕಾ ಖಂಡದಲ್ಲಿ ಇಂದು ಅತಿ ಹೆಚ್ಚಿನ ಸಂಖ್ಯೆಯ ಆನೆಹಿಂಡುಗಳು ದಕ್ಷಿಣ ಮತ್ತು ಪೂರ್ವ ಆಫ್ರಿಕಾಗಳಲ್ಲಿ ಕಂಡುಬರುವುವು. ಇಡೀ ಖಂಡದ ಒಟ್ಟು ಆನೆಗಳ ಸಂಖ್ಯೆಯ ದೊಡ್ಡ ಭಾಗ ಇಲ್ಲಿಯೇ ಇರುವುದು. ಅಲ್ಲದೆ ಸಮಾಧಾನಕರ ವಿಷಯವೆಂದರೆ ದಕ್ಷಿಣ ಮತ್ತು ಪೂರ್ವ ಆಫ್ರಿಕಾಗಳಲ್ಲಿ ಆನೆಗಳ ಸಂಖ್ಯೆ ಕಳೆದ ೧೨ ವರ್ಷಗಳಿಂದ ಸ್ಥಿರವಾಗಿದೆ ಅಥವಾ ವಾರ್ಷಿಕ ೪.೫% ರಷ್ಟು ಹೆಚ್ಚುತ್ತಿದೆ. ಪಶ್ಚಿಮ ಆಫ್ರಿಕಾದಲ್ಲಿರುವ ಆನೆಗಳ ಸಂಖ್ಯೆ ಕಡಿಮೆ ಮತ್ತು ಚದುರಿಹೋಗಿದೆ. ಮಧ್ಯ ಆಫ್ರಿಕಾದ ಗೊಂಡಾರಣ್ಯಗಳಲ್ಲಿರುವ ಆನೆಗಳ ಗಣತಿ ಸಾಧ್ಯವಾಗಿಲ್ಲ. ಆದರೆ ಈಲ್ಲಿ ದಂತಕ್ಕಾಗಿ ಮತ್ತು ಮಾಂಸಕ್ಕಾಗಿ ಆನೆಗಳ ಹತ್ಯೆ ಅವ್ಯಾಹತವಾಗಿ ಸಾಗಿದೆಯೆಂಬ ಸುದ್ದಿಗಳಿವೆ.

ದೈತ್ಯ ಜೀವಿ ಆನೆ
ಆನೆಯು ಅತಿ ಬುದ್ಧಿಶಾಲಿಯಾದ ಪ್ರಾಣಿ

ಐದು ಕಿಲೋಗ್ರಾಂಗಳಷ್ಟು ತೂಕವಿರುವ ಆನೆಯ ಮೆದುಳು ನೆಲದ ಮೇಲಿನ ಯಾವುದೇ ಪ್ರಾಣಿಯ ಮೆದುಳಿಗಿಂತ ದೊಡ್ಡದು. ಆನೆಯು ಅತಿ ಬುದ್ಧಿಶಾಲಿಯಾದ ಪ್ರಾಣಿಯೆಂದು ಹೆಸರಾಗಿದೆ. ದುಃಖ, ಆಟ, ಸಲಕರಣೆಗಳ ಉಪಯೋಗ, ಮಮಕಾರ ಮತ್ತು ತನ್ನರಿವು ಇವುಗಳಲ್ಲಿ ಆನೆಯು ಚಾಣಾಕ್ಷತೆಯನ್ನು ಪ್ರದರ್ಶಿಸುತ್ತದೆ. ಈ ವಿಚಾರಗಳಲ್ಲಿ ಮಾನವನೂ ಸೇರಿದಂತೆ ಬುದ್ಧಿವಿಕಾಸಗೊಂಡ ಪ್ರಾಣಿಗಳೊಡನೆ ಸಾಮ್ಯತೆ ಇದೆ. ಆನೆಯ ಕಿವಿ ಬಲು ಸೂಕ್ಷ್ಮ ಮತ್ತು ವಾಸನಾಗ್ರಹಣ ಶಕ್ತಿ ಕೂಡ.

ಆಫ್ರಿಕಾದ ದಂತಚೋರರು ಒಂದೇ ಸಮನೆ ಕೇವಲ ದೊಡ್ಡ ದಂತವುಳ್ಳ ಆನೆಗಳನ್ನು ಬೇಟೆಯಾಡಿದರು. ಇದರಿಂದ ಒಂದು ವಿಶಿಷ್ಟ ಪರಿಸ್ಥಿತಿಯುಂಟಾಗಿ ಹೆಣ್ಣಾನೆಗಳು ಸಂತಾನಕ್ಕಾಗಿ ಚಿಕ್ಕ ದಂತವುಳ್ಳ ಅಥವಾ ದಂತವೇ ಇಲ್ಲದ ಗಂಡಾನೆಗಳನ್ನು ಕೂಡಬೇಕಾಯಿತು. ಈ ಪ್ರಕ್ರಿಯೆ ದಶಕಗಳ ಕಾಲ ಮುಂದುವರಿದು ಆನೆಗಳ ವಂಶವಾಹಿಯಲ್ಲಿ ಅನೇಕ ಬದಲಾವಣೆಯನ್ನುಂಟುಮಾಡಿತು. ಇಂದು ಜನಿಸುವ ಆನೆಗಳಲ್ಲಿ ೩೦%ರಷ್ಟಕ್ಕೆ ದಂತಗಳು ಮೊಳೆಯುವುದೇ ಇಲ್ಲ. ಒಂದೊಮ್ಮೆ ತೀರಾ ಅಪರೂಪದ ವಿದ್ಯಮಾನವಾಗಿದ್ದ ಇದು ಇಂದು ಸಹಜಸಾಮಾನ್ಯವಾಗಿದೆ. ಆನೆಗಳು ತಮ್ಮ ದಂತಗಳನ್ನು ಹಲವು ಬಗೆಯಲ್ಲಿ ಉಪಯೋಗಕ್ಕೆ ತಂದುಕೊಳ್ಳುವುದರಿಂದ ದಂತವಿಹೀನ ಆನೆಗಳು ತಮ್ಮ ಸಹಜ ಜೀವನದ ವಿಧಾನವನ್ನು ಬಹಳವಾಗಿ ಬದಲಾಯಿಸಿಕೊಳ್ಳಬೇಕಾಗುವುದು. ಮುಂದೊಮ್ಮೆ ಆನೆಗಳ ಜೀವನಶೈಲಿ ಬಹುಶಃ ಸಂಪೂರ್ಣವಾಗಿ ಬೇರೆಯಾಗಿಬಿಡಬಹುದು.

ಮಾನವು ಅನಾದಿಕಾಲದಿಂದಲೂ ಆನೆಗಳನ್ನು ಪಳಗಿಸಿ ಶ್ರಮದ ಕಾರ್ಯಗಳಿಗೆ ಉಪಯೋಗಿಸಿಕೊಂಡಿರುವನು. ಸಿಂಧೂ ಕಣಿವೆಯ ನಾಗರಿಕತೆಯು ಈ ಅಂಶಕ್ಕೆ ಪುಷ್ಟಿ ಕೊಡುತ್ತದೆ. ಆದರೆ ಎಂದೂ ಮಾನವನು ಆನೆಯನ್ನು ಪೂರ್ಣವಾಗಿ ಪಳಗಿಸಲಾಗಿಲ್ಲ. ಮದವೇರಿದ ಗಂಡಾನೆಯು ಮಾನವನ ನಿಯಂತ್ರಣಕ್ಕೆ ಮೀರಿದುದು. ಆದ್ದರಿಂದಲೇ ಸಾಮಾನ್ಯವಾಗಿ ಮಾನವನು ಹೆಣ್ಣಾನೆಗಳನ್ನು ಪಳಗಿಸಿಟ್ಟುಕೊಳ್ಳುವನು. ಯುದ್ಧದಲ್ಲಿ ಬಳಸುವ ಆನೆಗಳು ಇದಕ್ಕೆ ಒಂದು ಅಪವಾದ. ಸಾಮಾನ್ಯವಾಗಿ ನಾಡಿನಲ್ಲಿ ಪಳಗಿಸಿದ ಆನೆಗಳ ಸಂತಾನೋತ್ಪತ್ತಿ ಮಾಡುವುದಕ್ಕಿಂತ ಕಾಡಿನಿಂದ ಮರಿಯಾನೆಗಳನ್ನು ಹಿಡಿದುತಂದು ಪಳಗಿಸುವುದೇ ಸೂಕ್ತವೆಂಬ ಅಭಿಪ್ರಾಯವಿದೆ. ಆನೆಗಳನ್ನು ಮಾನವನು ಬಹು ಭಾರದ ವಸ್ತುಗಳನ್ನು ಎತ್ತಲು ಮತ್ತು ಸಾಗಿಸಲು ಬಳಸಿಕೊಳ್ಳುವನು. ಮರದ ದಿಮ್ಮಿಗಳ ಸಾಗಣೆ ಇದಕ್ಕೆ ಒಂದು ಉದಾಹರಣೆ. ಹೆಚ್ಚಿನ ಪಳಗಿಸಿದ ಆನೆಗಳು ಏಷ್ಯಾದ ಆನೆಗಳು. ಆಫ್ರಿಕಾದ ಆನೆಗಳು ಕೊಂಚ ಉಗ್ರಸ್ವಭಾವದವುಗಳಾದ್ದರಿಂದ ಅವುಗಳನ್ನು ಪಳಗಿಸುವುದು ಕಷ್ಟಸಾಧ್ಯ. ಈಚೆಗೆ ಈ ದಿಸೆಯಲ್ಲಿ ಕೆಲ ಪ್ರಯತ್ನಗಳು ನಡೆದಿವೆ.

ವಯಸ್ಕ ಗಂಡಾನೆಗಳು ನಿಯತವಾಗಿ ಮದವೇರಿದ ಸ್ಥಿತಿಯನ್ನು ತಲುಪುತ್ತವೆ. ಇದಕ್ಕೆ ಮಸ್ತ್ ಹಿಂದಿ ಭಾಷೆಯ ಪದ ಎಂದು ಹೆಸರು. ಇಂತಹ ಸಮಯದಲ್ಲಿ ಆನೆಯು ಅತ್ಯಂತ ಉನ್ಮತ್ತಾವಸ್ಥೆಯಲ್ಲಿದ್ದು ತೀವ್ರ ಆಕ್ರಮಣಕಾರಿ ಪ್ರವೃತ್ತಿ ತೋರುವುದು. ಅಲ್ಲದೆ ತಲೆಯ ಪಾರ್ಶ್ವಗಳಲ್ಲಿರುವ ಗ್ರಂಥಿಗಳಿಂದ ಒಂದು ವಿಶಿಷ್ಟ ದ್ರವ ಸ್ರವಿಸುತ್ತಿರುತ್ತದೆ. ಮದೋನ್ಮತ್ತ ಆನೆಯು ಅತಿ ಅಪಾಯಕಾರಿಯಾಗಿದ್ದು ಇದರ ನಿಯಂತ್ರಣ ಸಾಧ್ಯವಿಲ್ಲ. ಪಳಗಿಸಿದ ಆನೆಗಳಲ್ಲಿ ಮದವೇರುವ ಸೂಚನೆ ಕಂಡ ಕೂಡಲೇ ಇವುಗಳನ್ನು ಭದ್ರವಾಗಿ ಒಂದು ಮರಕ್ಕೆ ಕಟ್ಟಿಹಾಕಿ ಮದವಿಳಿಯುವವರೆಗೂ ಆಹಾರ ಮತ್ತು ನೀರನ್ನು ನೀಡಲಾಗುವುದಿಲ್ಲ. ಈ ಮದವೇರುವ ವಿದ್ಯಮಾನ ಸಾಮಾನ್ಯವಾಗಿ ತರುಣ ಗಂಡಾನೆಗಳಲ್ಲಿ ಕಾಣಿಸುವುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಬ್ರೆಡ್

ಬ್ರೆಡ್ ನವಶಿಲಾಯುಗದ ಆಹಾರದ ಚಕ್ರದಲ್ಲಿ ಸೇರಿದೆ

ಗಿಳಿ

ಮಾನವನಿಗೆ ಸದಾ ಪ್ರಿಯವಾದ ಮುದ್ದಿನ ಜೀವಿ ಗಿಳಿ