in ,

ನವದುರ್ಗಗಳಲ್ಲಿ ಒಂದು ಹುತ್ರಿದುರ್ಗ

ಹುತ್ರಿದುರ್ಗ
ಹುತ್ರಿದುರ್ಗ

ಸಮುದ್ರ ಮಟ್ಟದಿಂದ ಸುಮಾರು 3712 ಅಡಿಗಳ ಎತ್ತರದಲ್ಲಿರುವ ಹುತ್ರಿದುರ್ಗದಲ್ಲಿರುವ ದೊಡ್ಡಬೆಟ್ಟದ ಮೇಲೆ ಹಳೆಯ ಕೋಟೆ ಮತ್ತು ದೇವಸ್ಥಾನವಿದೆ. ಬೆಟ್ಟದ ಬುಡದಲ್ಲಿ ಅದೇ ಹೆಸರಿನ ಹಳ್ಳಿಯೂ ಇದೆ. ವಿಜಯನಗರದ ಅರಸರ ಸಾಮಂತರಾಗಿದ್ದ ಯಲಹಂಕ ನಾಡಪ್ರಭು ಕೆಂಪೇಗೌಡರ ಕಾಲದಲ್ಲಿ (ಕ್ರಿ.ಶ. 1534) ನಿರ್ಮಿಸಿದ ಕೋಟೆಯಿಂದಾಗಿ ಮತ್ತು ೩ನೇ ಆಂಗ್ಲೋ ಮೈಸೂರು ಯುದ್ದದಿಂದಾಗಿ ಹುತ್ರಿದುರ್ಗವು ಐತಿಹಾಸಿಕವಾಗಿ ಮಹತ್ವ ಹೊಂದಿದೆ. ಹುತ್ರಿದುರ್ಗ ಹಳ್ಳಿಯನ್ನು ಸುತ್ತುವರೆದ ಎರಡು ಬೆಟ್ಟದತುದಿಗಳ ಮೇಲೆ ಈ ಕೋಟೆಯನ್ನು ಕಾಣಬಹುದು. ಇದು ಒಂದು ಏಳು ಸುತ್ತಿನ ಕೋಟೆಯಾಗಿತ್ತು. ಈಗ ಕೋಟೆ ಶಿಥಿಲಾವಸ್ಥೆಯಲ್ಲಿದೆ. ಬೆಟ್ಟದ ಮೇಲುಗಡೆ ಶಿವ ಮತ್ತು ನಂದಿ ಗುಡಿಯಿದೆ. ಪ್ರತಿ ಸೋಮವಾರ ಮತ್ತು ಶುಕ್ರವಾರದಂದು ಪೂಜೆ ಸಲ್ಲಿಸಲಾಗುತ್ತದೆ.

ನವದುರ್ಗಗಳಲ್ಲಿ ಒಂದು ಹುತ್ರಿದುರ್ಗ
ಹುತ್ರಿದುರ್ಗ ಶಿವ ಮತ್ತು ನಂದಿ ಗುಡಿ

ನವದುರ್ಗಗಳಲ್ಲಿ ಒಂದೆನಿಸಿರುವ ಹುತ್ರಿದುರ್ಗವು ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಸುಮಾರು 65 ಕಿ.ಮಿ. ದೂರದಲ್ಲಿದೆ. ಕುಣಿಗಲ್‍ನಿಂದ ಆಗ್ನೇಯ ದಿಕ್ಕಿಗೆ 16 ಕಿ.ಮೀ. ದೂರವಿರುವ ಹುತ್ರಿದುರ್ಗವು ಮಾಗಡಿಯ ವಾಯುವ್ಯ ದಿಕ್ಕಿಗೆ ಸರಿಸುಮಾರು ಅಷ್ಟೇ ದೂರದಲ್ಲಿದೆ. ಇದು ತುಮಕೂರು ಜಿಲ್ಲೆಯಲ್ಲಿದೆ. ಮಾಗಡಿ-ಕುಣಿಗಲ್ ರಾಜ್ಯ ಹೆದ್ದಾರಿ-94 ರಿಂದ ಸುಮಾರು 7 ಕಿ.ಮಿ. ದೂರದಲ್ಲಿದೆ.

ಮಾಗಡಿ ಮತ್ತು ಕುಣಿಗಲ್ ನಡುವಿನ ಸಂತೇಪೇಟೆಯ ಬೆಟ್ಟಸಾಲುಗಳ ಮಧ್ಯದಲ್ಲಿ ಹುತ್ರಿ ಎಂಬ ಪುಟ್ಟಗ್ರಾಮವಿದೆ. ನಿಸರ್ಗದ ಮಡಿಲಿನಲ್ಲಿರುವ ಈ ಗ್ರಾಮದ ಸುತ್ತ ದೊಡ್ಡಬೆಟ್ಟ, ಬಸವನದುರ್ಗದ ಬೆಟ್ಟ ಹಾಗೂ ತಿರುಮಲ ಬೆಟ್ಟಗಳನ್ನು ಕಾಣಬಹುದಾಗಿದೆ. ಹುತ್ರಿ ಗ್ರಾಮವಿರುವ ಕಾರಣ ದಿಂದಾಗಿ ಇಲ್ಲಿರುವ ದೊಡ್ಡಬೆಟ್ಟವನ್ನು ಹುತ್ರಿ ಬೆಟ್ಟ ಎಂದು ಕರೆಯುತ್ತಾರೆ. ಮೂರು ಬೆಟ್ಟಗಳ ಮಧ್ಯದಲ್ಲಿರುವ ಹುತ್ರಿ ಗ್ರಾಮವನ್ನೂ ಸೇರಿಸಿಕೊಂಡು ಏಳುಸುತ್ತಿನ ಕೋಟೆಯನ್ನು ಯಲಹಂಕ ನಾಡಪ್ರಭು ಕೆಂಪೇಗೌಡರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ.

ಕೋಟೆಯ ನಿರ್ಮಾಣ ಕಾರ್ಯ ಕ್ರಿ.ಶ. 1534ರಲ್ಲಿ ಶುರುವಾಗಿರುವುದಾಗಿ ಕೋಟೆಯ ಎಲಿಯೂರು ದ್ವಾರದ ತೊಲೆಯ ಮೇಲಿರುವ ಶಾಸನದಿಂದ ತಿಳಿದುಬರುತ್ತದೆ. ಕೋಟೆಯಿರುವ ಕಾರಣದಿಂದಾಗಿ ಈ ಪ್ರದೇಶಕ್ಕೆ ಹುತ್ರಿದುರ್ಗ ಎಂಬ ಹೆಸರು ಬಂದಿದೆ. ಹುತ್ರಿದುರ್ಗವು ಸಮುದ್ರ ಮಟ್ಟದಿಂದ 3713 ಅಡಿ ಎತ್ತರದಲ್ಲಿದೆ. ಪುರಾಣಗಳಲ್ಲಿ ಕಾಮಗಿರಿ ಎಂತಲೂ, ಕೆಂಪೇಗೌಡರ ಸಂತತಿಯಲ್ಲಿ ಕೊನೆಯವರಾದ ಕೆಂಪವೀರಪ್ಪಗೌಡರ ಕಾಲದಲ್ಲಿ ದೇವಗಿರಿ ಎಂದೂ ಕರೆಸಿಕೊಂಡಿದೆ.
ಈ ದುರ್ಗವು ಮೈಸೂರು ಅರಸರ ನಂತರ ಟಿಪ್ಪು ಸುಲ್ತಾನನ ಆಳ್ವಿಕೆಯ ಪ್ರದೇಶವಾಗಿದ್ದು 1791-92ರಲ್ಲಿ ನಡೆದ 3ನೇ ಆಂಗ್ಲೋ-ಮೈಸೂರು ಯುದ್ದದ ವೇಳೆ ಬ್ರಿಟೀಷ್ ಸೇನಾಧಿಪತಿ ಲಾರ್ಡ್ ಕಾರ್ನ್‍ವಾಲೀಸ ಹಾಗು ಲೆಫ್ಟಿನೆಂಟ್ ಕರ್ನಲ್ ಸ್ಟುವರ್ಟ್ ಟಿಪ್ಪುವಿನ ಸೈನಿಕರನ್ನು ಇಲ್ಲಿಂದ ಓಡಿಸಿ ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆÀ. ಈ ವೇಳೆಯಲ್ಲಿ ಸುಸ್ಥಿತಿಯಲ್ಲಿದ್ದ ಕೋಟೆಯು ಮದ್ದು-ಗುಂಡುಗಳ ದಾಳಿಗೆ ಸಿಕ್ಕಿ ಕೋಟೆಯ ಬಾಗಿಲು ಸೇರಿದಂತೆ ಹಲವು ಭಾಗಗಳು ನಾಶವಾಗಿರುವುದು ತಿಳಿದು ಬರುತ್ತದೆ.

ಆಂಗ್ಲರ ಉಚ್ಛಾರಣೆಯ ದೋಷದಿಂದ ರೂಪಾಂತರಗೊಳ್ಳುವ ಹುತ್ರಿದುರ್ಗವು ಬ್ರಿಟೀಷ್ ಲೈಬ್ರರಿಯಲ್ಲಿನ ದಾಖಲೆಗಳಲ್ಲಿ “ಔಟ್ರ ಡ್ರೂಗ್” ಎಂದು ದಾಖಲಾಗಿದೆ. 1799ರಲ್ಲಿ ನಡೆಯುವ 4ನೇ ಆಂಗ್ಲೋ-ಮೈಸೂರು ಯುದ್ದದಲ್ಲಿ ಬ್ರಿಟೀಷರು ಮೈಸೂರನ್ನು ವಶಪಡಿಸಿ ಕೊಳ್ಳುವವರೆಗೂ ಹುತ್ರಿದುರ್ಗವು ಬ್ರಿಟೀಷ್ ಸೈನ್ಯಕ್ಕೆ ಅಗತ್ಯವಾದ ಆಹಾರ, ದವಸ-ಧಾನ್ಯಗಳು ಮತ್ತು ಯುದ್ದದಲ್ಲಿ ಭಾಗವಹಿಸಿದ್ದ ಕುದುರೆಗಳಿಗೆ ಆಹಾರವನ್ನು ಪೂರೈಕೆ ಮಾಡುತ್ತಿತ್ತು.
ಅಲ್ಲದೇ ಇಲ್ಲಿ ಬ್ರಿಟೀಷ್ ಸೈನಿಕರಿಗೆ ಶುಶ್ರೂಷೆ ಮಾಡಲು ಆಸ್ಪತ್ರೆ ಹಾಗೂ ಶಸ್ತ್ರಾಸ್ತ್ರಗಳ ಸಂಗ್ರಹಗಾರಗಳು ಇದ್ದವೆಂಬುದು ಬ್ರಿಟೀಷ್ ಲೈಬ್ರರಿಯಲ್ಲಿನ ದಾಖಲೆಗಳಿಂದ ತಿಳಿದುಬರುತ್ತದೆ. ಕೋಟೆಯ ರಚನೆಗೆ ಹಾಗೂ ಕೋಟೆಯ ಸುತ್ತಲಿನ ನಿಸರ್ಗ ಸೌಂದರ್ಯಕ್ಕೆ ಮನಸೋತ ಬ್ರಿಟೀಷ್ ಚಿತ್ರಕಾರರು ತಮ್ಮ ಕುಂಚದಿಂದ ಹಲವಾರು ಸುಂದರ ಚಿತ್ರಗಳನ್ನು ರಚಿಸಿರುವುದು ಹುತ್ರಿದುರ್ಗದ ನಿಸರ್ಗ ರಮಣೀಯತೆಗೆ ಸಾಕ್ಷಿಯಾಗಿದೆ.

ಹುತ್ರಿದುರ್ಗವು ಸಾಂಪ್ರದಾಯಿಕವಾಗಿ ಕೆಂಪೇಗೌಡರು ನಿರ್ಮಿಸಿದ ಕೋಟೆ ಕೊತ್ತಳಗಳಿಂದ ಹೆಸರುವಾಸಿಯಾಗಿದೆ. ಇದಲ್ಲದೆ ಟಿಪ್ಪುವಿನ ವಶಕ್ಕೆ ಬಂದ ಮೇಲೆ ಆತ ಯೂರೋಪಿಯನ್ನರನ್ನು ಅಡಗಿಸಿಡಲು ಈ ಕೋಟೆ ಬಳಸಿಕೊಂಡಿರುವುದು ತಿಳಿಯುತ್ತದೆ. ಮುಂದೆ ೧೭೯೧-೯೨ ರಲ್ಲಿ ರಂದು ಮೈಸೂರಿನ ಟಿಪ್ಪು ಸುಲ್ತಾನ್ ಹಾಗೂ ಕಾರ್ನ್‌ವಾಲಿಸ್ ಅವರ ನಡುವೆ ನಡೆದ ಮೂರನೇ ಆಂಗ್ಲೋ ಮೈಸೂರು ಯುದ್ದದ ಕಾರಣದಿಂದಾಗಿ ಈ ಬಲಿಷ್ಠ ದುರ್ಗದ ಖ್ಯಾತಿ ಜಾಗತೀಕವಾಗಿ ಪ್ರಚಲಿತಕ್ಕೆ ಬಂತು. ಹುತ್ರಿದುರ್ಗಕ್ಕೆ ಮುತ್ತಿಗೆ ಹಾಕಿದ ವಿವರಣೆಯು ಕಾರ್ನ್ ವಾಲೀಸನ ಡೈರಿ, ಬ್ರಿಟೀಷರ ಕಲಾಕೃತಿಗಳು, ನಕ್ಷೆಗಳು ಸೇರಿದಂತೆ ಹಲವು ಕಡತಗಳಲ್ಲಿ ದಾಖಲಾಗಿದೆ.

ನವದುರ್ಗಗಳಲ್ಲಿ ಒಂದು ಹುತ್ರಿದುರ್ಗ
ಹುತ್ರಿದುರ್ಗ ಬೆಟ್ಟ

ಹುತ್ರಿಯು ಸುಮಾರು ಮನೆಗಳಿರುವ ಪುಟ್ಟಗ್ರಾಮವಾಗಿದ್ದು ಇಲ್ಲಿರುವ ದೊಡ್ಡ ಬೆಟ್ಟ ಹಾಗೂ ಬಸವನಬೆಟ್ಟದ ಮಧ್ಯದಲ್ಲಿ ಆಯತಾಕಾರವಾಗಿ ಊರು ಹರಡಿಕೊಂಡಿದೆ. ನೆಲಮಟ್ಟದಿಂದ ಸುಮಾರು 90 ಅಡಿ ಎತ್ತರದ ಕಣಿವೆಯಲ್ಲಿರುವ ಕಾರಣ ದೂರದಿಂದ ಊರು ಗೋಚರಿಸುವುದಿಲ್ಲ. ಸಮತಟ್ಟಾದ ಪ್ರದೇಶದಿಂದ ಕೂಡಿರುವ ಈ ಊರನ್ನು ಮುಖ್ಯರಸ್ತೆ ಮತ್ತು ಅಡ್ಡರಸ್ತೆಗಳಿಂದ ವಿಂಗಡಿಸಲಾಗಿದೆ.
ಬೆಟ್ಟಗಳಡಿಯ ಕಣವೆ ಪ್ರದೇಶದಲ್ಲಿರುವ ಕಾರಣ ನೀರಿನ ಸಮಸ್ಯೆಯನ್ನು ತಪ್ಪಿಸಲು ಮಳೆನೀರನ್ನು ಸಂಗ್ರಹಿಸಲು ಅಗಲವಾದ ದೊಣೆಗಳನ್ನು ಮತ್ತು ಕೆಲವು ಕಡೆ ಕಲ್ಯಾಣಿಗಳನ್ನು ಮಾಡಲಾಗಿದೆ. ಊರಿನ ಉತ್ತರದ ಅಂಚಿನಲ್ಲಿ ಹಳೆಯ ವೀರಭದ್ರೇಶ್ವರ ದೇವಸ್ಥಾನವಿದೆ. ದೇವಾಲಯದ ಗರ್ಭಗುಡಿಯು ಚೌಕಾಕಾರವಾಗಿದ್ದು ಒಳಗಡೆ ವೀರಭದ್ರ ವಿಗ್ರಹವಿದೆ. ಅಂತರಾಳದ ದ್ವಾರವು ಅಲಂಕಾರಿಕ ಪಟ್ಟಿಕೆಗಳಿಂದ ಕೊಡಿದೆ.
ಮೂಲತಃ ತೆರೆದ ಮಂಟಪವಾಗಿದ್ದ ನವರಂಗವನ್ನು ಇತ್ತೀಚೆಗೆ ಗೋಡೆಗಳನ್ನು ನಿರ್ಮಿಸಿ ಮುಚ್ಚಲಾಗಿದೆ. ನವರಂಗದ ಕಂಬಗಳಲ್ಲಿ 17ನೇ ಶತಮಾನದ ಶಿಲ್ಪಶೈಲಿಗಳನ್ನು ಹೋಲುವ ಸೇರಿದ ಕಿರುಗಾತ್ರದ ಉಬ್ಬುಶಿಲ್ಪಗಳಿವೆ. ಕಣಿವೆಯ ಪ್ರದೇಶವಾದ ಕಾರಣ ಹುತ್ರಿ ಗ್ರಾಮವು ವೈರಿಗಳಿಗೆ ಅಷ್ಟು ಸುಲಭವಾಗಿ ತುತ್ತಾಗಲು ಸಾಧ್ಯವಿರಲಿಲ್ಲ. ಇದರಿಂದಾಗಿಯೇ ಪ್ರಾಚೀನ ಕಾಲದಿಂದಲೂ ಇಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದರೆಂದು ಸಂಶೋಧನೆಗಳಿಂದ ತಿಳಿದು ಬರುತ್ತದೆ.

ಹುತ್ರಿದುರ್ಗ ಕೋಟೆಯನ್ನು ಕಟ್ಟುವಾಗ ಬೆಟ್ಟಗಳ ಮಧ್ಯವಿರುವ ಮೈದಾನದಂತಹ ಜಾಗದಲ್ಲಿ ಹುತ್ರಿ ಎಂಬ ಗ್ರಾಮವನ್ನು ರಚಿಸಲಾಗಿದೆ. ಹುತ್ರಿ ಗ್ರಾಮವು ಸುತ್ತಲಿನ ಪ್ರದೇಶಕ್ಕಿಂತ ಸುಮಾರು 90 ಅಡಿ ಎತ್ತರದಲ್ಲಿದೆ. ಈ ಊರನ್ನು ಸೇರಿಸಿಕೊಂಡು ಸುತ್ತಲಿರುವ ಬೆಟ್ಟಗಳಿಗೆ ಹೊಂದಿ ಕೊಂಡಂತೆ ಆಯತಾಕಾರದ ಕೋಟೆಯನ್ನು ಕಟ್ಟಲಾಗಿದೆ.

ದೊಡ್ಡಬೆಟ್ಟ ಊರಿನ ಉತ್ತರದ ಅಂಚಿನಲ್ಲಿದ್ದರೆ ಬಸವನಬೆಟ್ಟವು ದಕ್ಷಿಣದ ಅಂಚಿನಲ್ಲಿದೆ. ಪುಟ್ಟದಾದ ತಿರುಮಲ ಬೆಟ್ಟವು ಪೂರ್ವದಿಕ್ಕಿನಲ್ಲಿದ್ದು, ಊರಿನ ಪಶ್ಚಿಮದಿಕ್ಕಿನಲ್ಲಿ ಇಳಿಜಾರಿನಂತಹ ಪ್ರದೇಶವಿದ್ದು ಇಲ್ಲಿ ಸಂತೇಪೇಟೆ ಎಂಬ ಗ್ರಾಮವಿದೆ. ಹುತ್ರಿದುರ್ಗವನ್ನು ಪ್ರವೇಶಿಸಲು ಸಂತೇಪೇಟೆಯನ್ನು ಹಾದುಹೋಗಬೇಕಾಗುತ್ತದೆ.

ಹುತ್ರಿದುರ್ಗದ ಕೋಟೇಯು ಆಯತಾಕಾರದಲ್ಲಿ ರಚನೆಯಾಗಿದೆ. ಕೋಟೆಯು ಅನೇಕ ಚೌಕಾಕಾರದ ಮತ್ತು ಅರ್ಧ ವರ್ತುಲಾಕಾರದ ಕೊತ್ತಳಗಳಿಂದ ಕೂಡಿದ್ದು ಮೂರು ಮುಖ್ಯ ದ್ವಾರಗಳನ್ನು ಹೊಂದಿದೆ. ಕೋಟೆಯ ನಿರ್ಮಾಣದಲ್ಲಿ ಅಲ್ಲಿಯೇ ದೊರೆಯುವ ವಿವಿಧ ಬಗೆಯ ಕಲ್ಲುಗಳನ್ನು ಬಳಸಲಾಗಿದೆ. ಕೋಟೆಯ ಗೋಡೆಗಳು ಸುಮಾರು ಮೂರರಿಂದ ಐದು ಮೀಟರ್ ಎತ್ತರವಿದ್ದು ಒಂದರಿಂದ ಎರಡು ಮೀಟರ್ ನಷ್ಟು ದಪ್ಪವಾಗಿವೆ.

ಬೆಟ್ಟದ ಕಣಿವೆಯಂತಹ ಪ್ರದೇಶದಲ್ಲಿ ಗೋಡೆಗಳ ಎತ್ತರವನ್ನು ಹೆಚ್ಚಿಸಿ ಬೆಟ್ಟದ ಮೇಲೆ ಗೋಡೆಯ ಎತ್ತರದ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಕೋಟೆ ಗೋಡೆಗಳ ಆಯಕಟ್ಟಿನ ಸ್ಥಳಗಳಲ್ಲಿ ಚೌಕಾಕಾರದ ಕೊತ್ತಳಗಳನ್ನು ನಿರ್ಮಿಸಲಾಗಿದೆ. ಕೊತ್ತಳಗಳು ನಾಲ್ಕರಿಂದ ಆರು ಮೀಟರ್ ಎತ್ತರವಿದ್ದು ಐದು ಮೀಟರಿನಷ್ಟು ಚೌಕಾಕಾರವಾಗಿವೆ. ಕೊತ್ತಳಗಳನ್ನು ಕೋಟೆಯಿಂದ ಮುಂದಕ್ಕೆ ಚಾಚಿಕೊಂಡಂತೆ ನಿರ್ಮಿಸಲಾಗಿತ್ತು. ಇದರಿಂದಾಗಿ ಕೋಟೆಯ ಹೊರಗಿನಿಂದ ವೈರಿಗಳು ಹಾರಿಸುತ್ತಿದ್ದ ಫಿರಂಗಿ ಗುಂಡುಗಳು ಕೋಟೆಯ ಒಳಕ್ಕೆ ಪ್ರವೇಶಿಸದಂತೆ ತಡೆಯಲು ಸಾಧ್ಯವಾಗುತ್ತಿತ್ತು. ಕೆಂಪೇಗೌಡರ ಕಾಲದಲ್ಲಿ ದುರ್ಗದ ಮೇಲೆ ದಂಡೆತ್ತಿ ಬರುವ ವೈರಿಗಳ ಮೇಲೆ ನಿಗಾವಹಿಸಲು ಕೊತ್ತಳಗಳನ್ನು ನಿರ್ಮಿಸಲಾಗಿತ್ತು. ಟಿಪ್ಪು ಸುಲ್ತಾನನ ಆಳ್ವಿಕೆಗೆ ಒಳಪಟ್ಟ ಮೇಲೆ ಗೋಡೆಗಳ ಕುಂಬಿಯನ್ನು ಹೆಚ್ಚಿಸಿ ಬಂದೂಕು ಹಾಗೂ ಫಿರಂಗಿಗಳನ್ನು ಬಳಸಲು ಕಿಂಡಿಗಳನ್ನು ಮಾಡಲಾಗಿದೆ.

ನವದುರ್ಗಗಳಲ್ಲಿ ಒಂದು ಹುತ್ರಿದುರ್ಗ
ಹುತ್ರಿದುರ್ಗ ಬೆಟ್ಟ

ದಕ್ಷಿಣದ ಅಂಚಿನಲ್ಲಿ ನೆಲಮಟ್ಟದಿಂದ 300 ಮೀಟರಿನಷ್ಟು ಎತ್ತರವಿರುವ ದೊಡ್ಡ ಬೆಟ್ಟವು ಹುತ್ರಿದುರ್ಗದ ಮುಖ್ಯವಾದ ಕೋಟೆ ಪ್ರದೇಶ. ವೈರಿಗಳಿಂದ ರಕ್ಷಣೆ ಪಡೆಯಲು ಅನ್ನುಕೂಲವಾಗುವಂತೆ ಬೆಟ್ಟದ ಬುಡದಿಂದ ಮೇಲ್ಭಾಗದರೆಗೂ ಸುಮಾರು ಎಂಟು ಗೋಡೆಗಳನ್ನು ನಿರ್ಮಿಸಲಾಗಿದೆ. ಮೂರರಿಂದ ನಾಲ್ಕು ಮೀಟರ್ ಎತ್ತರವಿರುವ ಗೋಡೆಗಳು ಒಂದರಿಂದ ಎರಡು ಮೀಟರ್ ದಪ್ಪವಾಗಿವೆ.

ಗಾರೆಯನ್ನು ಬಳಸದೆ ನಯಗೊಳಿಸಿದ ಇಲ್ಲವೇ ನುಣುಪಾದ ಕಲ್ಲುಗಳಿಂದ ಗೋಡೆಗಳನ್ನು ಕಟ್ಟಲಾಗಿದೆ. ಗೋಡೆಯ ಕುಂಬಿ ಭಾಗವನ್ನು ಇಳಿಜಾರಾಗಿ ಕಟ್ಟಲಾಗಿದ್ದು ಇಟ್ಟಿಗೆ ಮತ್ತು ಗಾರೆಯಿಂದ ಮಾಡಲಾಗಿದೆ. ಇಳಿಜಾರಾಗಿರುವ ಕುಂಬಿಯು ಕೋಟೆಯ ಹೊರಗಿನಿಂದ ವೈರಿಗಳು ಹಾರಿಸಿದ ಫಿರಂಗಿ ಗುಂಡು ಅಥವಾ ಈಟಿ, ಭರ್ಜಿಗಳಂತಹ ತೀಕ್ಷ್ಣವಾದ ಆಯುಧಗಳು ಕೋಟೇಯ ಒಳಭಾಗಕ್ಕೆ ಬೀಳುವುದನ್ನು ತಪ್ಪಿಸುತ್ತಿದ್ದವು.
ಕೋಟೆಯ ಕುಂಬಿಗೋಡೆಗಳಲ್ಲಿ ಕಿಂಡಿಗಳನ್ನು ಮಾಡಲಾಗಿದ್ದು ಸೈನಿಕರು ಕೋಟೆಯ ಒಳಗಿನಿಂದ ಹೊರಗಿನ ವೈರಿ ಸೈನಿಕರ ಮೇಲೆ ಪ್ರತಿದಾಳಿ ಮಾಡಲು ಸಹಕಾರಿಯಾಗಿದ್ದವು. ಟಿಪ್ಪು ಸುಲ್ತಾನನ ಕಾಲಾವಧಿಯಲ್ಲಿ ಇಳಿಜಾರಿನ ಕುಂಬಿ ಹಾಗು ಫಿರಂಗಿಗಳನ್ನು ಬಳಸಲು ತೆರೆದ ಕಿಂಡಿಗಳನ್ನು ನಿರ್ಮಿಸಲಾಗಿದೆ. ಗೊಡೆಯಲ್ಲಿ ಕುಂಬಿಗೆ ಹೊಂದಿಕೊಂಡಂತೆ ಪಹರೆ ಕಟ್ಟೆಯನ್ನು ಕಟ್ಟಲಾಗಿದ್ದು ಇದು ಸೈನಿಕರ ಪಹರೆಗೆ ಅನುಕೂಲಕರವಾಗಿತ್ತು.

ದೊಡ್ಡಬೆಟ್ಟದ ಕೋಟೆಯಲ್ಲಿ ಚೌಕಾಕಾರದ ಹಾಗು ವರ್ತುಲಾಕಾರದ ಕೊತ್ತಳಗಳಿವೆ. ಕೆಂಪೇಗೌಡರ ಕಾಲದಲ್ಲಿ ಕೇವಲ ಚೌಕಾಕಾರದ ಕೊತ್ತಳಗಳಿದ್ದರೆ, ಟಿಪ್ಪು ಸುಲ್ತಾನನ ಕಾಲಾವಧಿಯಲ್ಲಿ ನವೀಕರಣಗೊಳ್ಳುವ ಸಂಧರ್ಭದಲ್ಲಿ ಚೌಕಾಕಾರದ ಬದಲಾಗಿ ವರ್ತುಲಾಕಾರದ ಕೊತ್ತಳಗಳನ್ನು ನಿರ್ಮಿಸಲಾಗಿದೆ. ವರ್ತುಲಾಕಾರದ ಕೊತ್ತಳಗಳು ಫಿರಂಗಿಗಳನ್ನು ಬಳಸಲು ಸಹಕಾರಿಯಾಗಿದ್ದವು ಅಲ್ಲದೇ ಫಿರಂಗಿಗಳನ್ನು ಸುಲಭವಾಗಿ ತಿರುಗಿಸಲು ಸಾಧ್ಯವಾಗುತ್ತಿತ್ತು.
ದೊಡ್ಡಬೆಟ್ಟವು ವಿಶಾಲವಾಗಿದ್ದು ಇದನ್ನು ಪೂರ್ವದ ಆವರಣ ಮತ್ತು ಪಶ್ಚಿಮದ ಆವರಣಗಳೆಂದು ಎರಡು ಸಂಕೀರ್ಣಗಳಾಗಿ ವಿಂಗಡಿಸಲಾಗಿದೆ. ಈ ಎರಡೂ ಆವರಣಗಳನ್ನು ಚಿಕ್ಕದಾದ ಬಂಡೆಕಲ್ಲುಗಳು ಬೇರ್ಪಡಿಸುತ್ತವೆ. ಈ ಎರಡು ಸಂಕೀರ್ಣಗಳು ಕೆಲವು ವಿಶೇಷ ಕಟ್ಟಡಗಳಿಂದ ಕೂಡಿವೆ. ಅಲ್ಲದೇ ಇವೆರಡರ ನಡುವೆ ಕೊಂಡಿಯಾಗಿ ಒಂದು ಮಂಟಪವಿದ್ದು ಅದನ್ನು ಕೆಂಪೇಗೌಡರ ಹಜಾರ ಎಂದು ಕರೆಯುತ್ತಾರೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

ಅನನಾಸು ಹಣ್ಣು

ಉಷ್ಣವಲಯದಲ್ಲಿ ಬೆಳೆಯುವ ಹಣ್ಣು ಅನನಾಸು ಹಣ್ಣು, ಮನುಷ್ಯನ ಅರೋಗ್ಯಕ್ಕೆ ಉಪಕಾರಿಯಾಗಿದೆ

ಎರಡನೆಯ ಮೈಸೂರು ಯುದ್ಧ

ಎರಡನೆಯ ಮೈಸೂರು ಯುದ್ಧ