in

ರಾಷ್ಟ್ರ ಎಂಬುದು ಪ್ರಾಂತ್ಯವಾಚಕ ಪದ, ಮತ್ತೆ ಅದು ರಾಷ್ಟ್ರಕೂಟ ಆಯಿತು

ರಾಷ್ಟ್ರಕೂಟರು
ರಾಷ್ಟ್ರಕೂಟರು

ರಾಷ್ಟ್ರಕೂಟರು ಕ್ರಿ.ಶ. ೮ ರಿಂದ ೧೦ನೇ ಶತಮಾನದವರೆಗೆ ದಖ್ಖನವನ್ನು ಆಳಿದ ರಾಜವಂಶ. ದಂತಿದುರ್ಗನಿಂದ ಮೊದಲುಗೊಂಡ ಇವರ ಮೂಲಸ್ಥಾನ ಲಟ್ಟಲೂರು ಆಗಿದ್ದು, ತದನಂತರ ತಮ್ಮ ರಾಜಧಾನಿ ಮಾನ್ಯಖೇಟದಿಂದ ಆಳ್ವಿಕೆ ನಡೆಸಿದರು.

ರಾಷ್ಟ್ರ ಎಂಬುದು ಪ್ರಾಂತ್ಯವಾಚಕ ಪದ. ಈ ಅರ್ಥದಲ್ಲಿ ಇದು ಅಶೋಕನ ಕಾಲದಿಂದ ರಾಜಕೀಯ ವ್ಯವಹಾರದಲ್ಲಿ ಬಳಕೆಯಾಯಿತು. ಅನಂತರ ಪ್ರಾಂತ್ಯಾಧಿಕಾರಿ ಎಂಬ ಅಭಿಪ್ರಾಯದಲ್ಲಿ ರಾಷ್ಟ್ರಕೂಟ ಎಂಬ ಪದವಿಸೂಚಕ ವಿಶಿಷ್ಟ ಪದ ಪ್ರಯೋಗವಾಗತೊಡಗಿತು. ಇಂಥ ಪ್ರಾಂತ್ಯಾಧಿಕಾರಿಗಳ ವಂಶದವರು ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಊರ್ಜಿತರಾದರು. ಸಮಸ್ತ ಭಾರತದಲ್ಲಿ ಖ್ಯಾತಿವೆತ್ತು ಭವ್ಯ ಪರಂಪರೆಯಿಂದ ಆಳಿದವರು ಮಳಖೇಡದ ರಾಷ್ಟ್ರಕೂಟರು. ಇವರ ಮೂಲಸ್ಥಳ ಹಿಂದೆ ಪ್ರಾಚೀನ ಕರ್ನಾಟಕದಲ್ಲಿ ಸಮಾವೇಶಗೊಂಡಿದ್ದು, ಅನಂತರ ಮಹಾರಾಷ್ಟ್ರದಲ್ಲಿ ಸೇರ್ಪಡೆಯಾದ ಲತ್ತನೂರು ಎಂದರೆ ಲಾತೂರು ಎಂಬ ಪಟ್ಟಣ. ರಾಷ್ಟ್ರಕೂಟ ಎಂಬ ಹೆಸರುವೆತ್ತ ಹಲವು ಅರಸು ಮನೆತನಗಳು ಭಾರತದ ನಾನಾ ಪ್ರದೇಶಗಳಲ್ಲಿ ಆಳಿದುವು.

ರಾಷ್ಟ್ರ ಎಂಬುದು ಪ್ರಾಂತ್ಯವಾಚಕ ಪದ, ಮತ್ತೆ ಅದು ರಾಷ್ಟ್ರಕೂಟ ಆಯಿತು
ಅಮೋಘವರ್ಷ ನೃಪತುಂಗ

ರಾಷ್ಟ್ರಕೂಟ ವಂಶದವರು ಮೊದಲಿಗೆ ಬಾದಾಮಿ ಚಾಲುಕ್ಯರ ಮಾಂಡಲಿಕರಾಗಿದ್ದರು. ಚಾಲುಕ್ಯರ ೨ನೆಯ ವಿಕ್ರಮಾದಿತ್ಯ ಮತ್ತು ಕೀರ್ತಿವರ್ಮರ ಕಾಲದಲ್ಲಿ ಈ ವಂಶದ ದಂತಿದುರ್ಗ ಪ್ರಬಲನಾಗಿ ಚಾಳುಕ್ಯರಿಂದ ಸಾರ್ವಭೌಮಾಧಿಕಾರವನ್ನು ವಶಪಡಿಸಿಕೊಂಡ. ೧ನೆಯ ಕೃಷ್ಣ, ಧ್ರುವ, ೩ನೆಯ ಗೋವಿಂದ, ಅಮೋಘವರ್ಷ ನೃಪತುಂಗ, ೨ನೆಯ ಕೃಷ್ಣ, ೩ನೆಯ ಕೃಷ್ಣ ಮುಂತಾದ ಪ್ರಮುಖ ರಾಷ್ಟ್ರಕೂಟ ದೊರೆಗಳ ಕಾಲದಲ್ಲಿ ಕರ್ನಾಟಕ ರಾಜ್ಯವೈಭವ ಅತ್ಯುಚ್ಚ ದೆಶೆ ತಲುಪಿತು. ಮಾನ್ಯಖೇಟ ಅಥವಾ ಈಗಿನ ಮಳಖೇಡಗುಲ್ಬರ್ಗಾ ಜಿಲ್ಲೆ ಇವರ ಪ್ರಧಾನ ರಾಜಧಾನಿಯಾಗಿತ್ತು. ೧ನೆಯ ಕೃಷ್ಣನ ಕಾಲದಲ್ಲಿ ಚಾಳುಕ್ಯರು ನಾಮಾವಶೇಷರಾದರು. ಆತ ಜೊತೆಗೆ ಕೊಂಕಣ, ಗಂಗ ಮತ್ತು ವೆಂಗಿ ರಾಜ್ಯಗಳನ್ನು ಗೆದ್ದು ತನ್ನ ಅಧಿಕಾರವನ್ನು ಬಲಗೊಳಿಸಿದ. ಉತ್ತರಭಾರತದಲ್ಲಿ ಅವ್ಯವಸ್ಥಿತವಾಗಿದ್ದ ಕನೌಜ್ ರಾಜ್ಯದ ಮೇಲೆ ಕಣ್ಣುಹಾಕಿದ್ದ ಮಾಳ್ವದ ಪ್ರತೀಹಾರ ವತ್ಸರಾಜ ಮತ್ತು ಬಂಗಾಲದ ಧರ್ಮಪಾಲನನ್ನು ಧ್ರುವ ಸೋಲಿಸಿ ಕನೌಜಿನಿಂದ ಕಾಶಿಯವರೆಗೂ ಕರ್ನಾಟಕದ ಪ್ರಭಾವವನ್ನು ಹಬ್ಬಿಸಿದ. ದಕ್ಷಿಣದಲ್ಲಿ ಗಂಗ ಮತ್ತು ಪಲ್ಲವರನ್ನೂ ಪರಾಜಯಗೊಳಿಸಿದ. ಮೂರನೆಯ ಗೋವಿಂದ ಉತ್ತರಭಾರತದಲ್ಲಿ ಪುನಃ ತಲೆದೋರಿದ್ದ ಪ್ರತೀಹಾರ-ಬಂಗಾಳಗಳ ವಿವಾದದಲ್ಲಿ ಪ್ರವೇಶಿಸಿ ಮೊದಲು ಪ್ರತೀಹಾರ ನಾಗಭಟನನ್ನು ಸೋಲಿಸಿ ಕನೌಜನ್ನು ವಶಪಡಿಸಿಕೊಂಡ. ಬಂಗಾಳದ ಧರ್ಮಪಾಲ ತಾನಾಗಿಯೇ ಶರಣಾಗತನಾದ. ವೆಂಗಿ ರಾಜ್ಯದಲ್ಲಿ ತನ್ನ ಹಸ್ತಕನಿಗೆ ರಾಜ್ಯ ಕೊಡಿಸಿ ಅನಂತರ ದಕ್ಷಿಣದಲ್ಲಿ ಗಂಗ, ಪಲ್ಲವ, ಪಾಂಡ್ಯ, ಕೇರಳಗಳ ಒಕ್ಕೂಟವನ್ನು ಎದುರಿಸಿ ಸದೆಬಡಿದು, ಕಂಚಿಯನ್ನು ವಶಪಡಿಸಿಕೊಂಡ.

ರಾಜ್ಯಾಡಳಿತವೂ ಸುವ್ಯವಸ್ಥಿತವಾಯಿತು. ಮೂರನೆಯ ಕೃಷ್ಣನ ಕಾಲದಲ್ಲಿ ಚೋಳರು ಪ್ರಬಲರಾಗುತ್ತಿದ್ದರು. ಅವರ ಉಪಟಳ ತಪ್ಪಿಸಲು, ಆತ ಆ ವಂಶದ ಪರಾಂತಕನನ್ನು ತಕ್ಕೋಲದಲ್ಲಿ ಸೋಲಿಸಿ ಯುವರಾಜ ರಾಜಾದಿತ್ಯನನ್ನು ಕೊಂದುಹಾಕಿದ. ಕಂಚಿಯೂ ರಾಜಧಾನಿಯಾದ ತಂಜಾವೂರೂ ರಾಷ್ಟ್ರಕೂಟರ ವಶವಾಯಿತು. ಆತ ರಾಮೇಶ್ವರದವರೆಗೂ ಹೋಗಿ ಅಲ್ಲಿ ತನ್ನ ಜಯಸ್ತಂಭ ನೆಡಿಸಿದ. ಈ ದಂಡಯಾತ್ರೆಯಲ್ಲಿ ಅಮೋಘ ಸೇವೆ ಸಲ್ಲಿಸಿದ ಗಂಗರಸ ಭೂತುಗನಿಗೆ ಬನವಾಸಿ ಮುಂತಾದ ಪ್ರಾಂತ್ಯಗಳನ್ನು ಕೊಟ್ಟ. ಈ ವಿಜಯಗಳಿಂದ ಚೋಳರ ಕ್ಲೈಬ್ಯ ನೂರು ವರ್ಷಗಳವರೆಗೆ ಮುಂದುವರಿಯಿತು. ಮೂರನೆಯ ಕೃಷ್ಣ ಉತ್ತರ ಭಾರತದಲ್ಲೂ ಕೆಲವು ವಿಜಯಗಳನ್ನು ಗಳಿಸಿದ. ಈ ರೀತಿಯಾಗಿ ದಕ್ಷಿಣದಲ್ಲಿ ಚೋಳರನ್ನೂ ಉತ್ತರದ ಅನೇಕ ರಾಜರನ್ನೂ ಸೋಲಿಸಿ ಕನೌಜಿನಿಂದ ಕನ್ಯಾಕುಮಾರಿಯವರೆಗೂ, ಗುಜರಾತಿನಿಂದ ಬಂಗಾಳದವರೆಗೂ, ರಾಷ್ಟ್ರಕೂಟರು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದರು.

೩ನೆಯ ಕೃಷ್ಣನ (೯೩೯-೯೬೮) ಕಾಲದಲ್ಲಿ ಪರಮಾವಧಿ ತಲಪಿದ್ದ ಇವರ ರಾಜಕೀಯ ಪ್ರಭಾವ ಅನಂತರ ಇಳಿಮುಖವಾಯಿತು. ಗಂಗವಂಶದ ಮಾರಸಿಂಹನ ಅಮಿತ ಪ್ರಯತ್ನವೂ ವಿಫಲವಾಗಿ ಕಲ್ಯಾಣ ಚಾಳುಕ್ಯ ಮನೆತನದ ಇಮ್ಮಡಿ ತೈಲಪನಿಂದ ರಾಷ್ಟ್ರಕೂಟ ಮನೆತನ ೯೭೩ರಲ್ಲಿ ಕೊನೆಗೊಂಡಿತು. ರಾಷ್ಟ್ರಕೂಟರು ಕದಂಬ, ಚಾಲುಕ್ಯರಂತೆ ಕರ್ನಾಟಕದವರು. ಅವರು ವಿದರ್ಭ ಪ್ರದೇಶದಲ್ಲಿ ಮೊದಲಿಗೆ ಇದ್ದುದರಿಂದ ಮತ್ತು ಆ ಪ್ರದೇಶ ಈಗ ಮಹಾರಾಷ್ಟ್ರಕ್ಕೆ ಸೇರಿರುವುದರಿಂದ ಅವರನ್ನು ಮರಾಠರ ಮೂಲಕ್ಕೆ ನಿರ್ದೇಶಿಸಲಾಗದು. ಆ ರಾಜರ ಹೆಸರುಗಳು, ಅವರ ಕಾಲದಲ್ಲಿ ಕನ್ನಡ ಭಾಷೆ ಸಾಹಿತ್ಯಗಳಿಗೆ ದೊರಕಿದ ಪ್ರೋತ್ಸಾಹ, ಆ ಕಾಲದ ಶಾಸನಗಳ ಭಾಷೆ ಮತ್ತು ಲಿಪಿ- ಈ ಆಧಾರಗಳಿಂದ ಅವರ ಕನ್ನಡ ಮೂಲ ಸಂದೇಹಾತೀತವಾಗಿದೆ. ವಿಷ್ಣುವಾಹನವಾದ ಗರುಡ ಅವರ ಲಾಂಛನ. ಅವರ ತಾಮ್ರ ಶಾಸನಗಳ ಮುದ್ರೆಯಲ್ಲೂ ಇದು ಕಾಣುತ್ತದೆ. ಈ ದೊರೆಗಳು ವಲ್ಲಭ, ಶ್ರೀಪೃಥ್ವೀವಲ್ಲಭ ಮುಂತಾದ ಚಾಲುಕ್ಯ ಬಿರುದುಗಳನ್ನು ಧರಿಸಲು ಚಾಲುಕ್ಯರಿಂದ ಅಧಿಕಾರ ಪಡೆದು, ಅದೇ ಪದ್ಧತಿಯನ್ನು ಮುಂದುವರಿಸಿಕೊಂಡು ಹೋದದ್ದು ಸ್ಪಷ್ಟವಾಗಿದೆ. ಬಹುಶಃ ಲಟ್ಟಲೂರು ಈಗಿನ ಹೈದರಾಬಾದ್ ಬಳಿಯ ಲಾಟೂರು ಇವರ ಮೂಲಸ್ಥಾನವೂ, ಮೊದಲ ರಾಜಧಾನಿಯೂ ಆಗಿತ್ತು. ಅನಂತರ ಅಚಲಾಪುರಕ್ಕೆ ಇವರು ಸ್ಥಾನಾಂತರ ಹೊಂದಿದರು. ದಂತಿದುರ್ಗ ಎಲ್ಲೋರವನ್ನು ತನ್ನ ಕೇಂದ್ರವನ್ನಾಗಿ ಮಾಡಿಕೊಂಡ. ನೃಪತುಂಗನ ಕಾಲದಲ್ಲಿ ಅನಂತರ ಮಾನ್ಯಖೇಟ ರಾಷ್ಟ್ರಕೂಟರ ರಾಜಧಾನಿಯಾಯಿತು.

ರಾಷ್ಟ್ರ ಎಂಬುದು ಪ್ರಾಂತ್ಯವಾಚಕ ಪದ, ಮತ್ತೆ ಅದು ರಾಷ್ಟ್ರಕೂಟ ಆಯಿತು
ರಾಷ್ಟ್ರಕೂಟರ ಲಾಂಛನ

ಅನೇಕ ರೀತಿಗಳಲ್ಲಿ ರಾಷ್ಟ್ರಕೂಟರ ಕಾಲ ಬಹಳ ಮುಖ್ಯವಾದದ್ದು. ಬಾದಾಮಿ ಚಾಲಕ್ಯ ಸಾಮ್ರಾಜ್ಯದ ಉತ್ತರಾಧಿಕಾರಿಗಳಾದ ಇವರು ತಮ್ಮ ಸಾಮ್ರಾಜ್ಯದ ಗಡಿಗಳನ್ನು ಬಹಳವಾಗಿ ವಿಸ್ತರಿಸಿದರು. ನರ್ಮದೆಯಿಂದ ಕಾವೇರಿಯವರೆಗಿನ ಭೂಭಾಗ ಇವರ ನೇರ ಆಳ್ವಿಕೆಗೆ ಸೇರಿತ್ತು. ಅಲ್ಲದೆ ದಕ್ಷಿಣ ಗುಜರಾತ್, ಮಾಳ್ವ, ಆಂಧ್ರದ ಬಹುಭಾಗ, ಕಂಚಿ ಮತ್ತು ತಂಜಾವೂರು ಪ್ರದೇಶಗಳ ಮೇಲೆ ಅನೇಕ ಬಾರಿ ತಮ್ಮ ಅಧಿಕಾರ ಸ್ಥಾಪಿಸಿದರು. ಮತ್ತೆ ಈ ವಂಶದ ಧೀರೋದಾತ್ತ ಸಮ್ರಾಟರು ಕನ್ಯಾಕುಮಾರಿಯಿಂದ ಹಿಮಾಲಯದವರೆಗೂ ಸೌರಾಷ್ಟ್ರದಿಂದ ಕಾಮರೂಪದವರೆಗೂ ತಮ್ಮ ಅಸಮಾನವಾದ ಸೈನ್ಯಗಳೊಂದಿಗೆ ಯುದ್ಧವಿಜಯಿಗಳಾಗಿ ಹಲವಾರು ಬಾರಿ ಸಂಚರಿಸಿದರು. ಪಶ್ಚಿಮ-ಮಧ್ಯಭಾರತಗಳಲ್ಲಿ ಘೂರ್ಜರ ಪ್ರತೀಹಾರರೂ ಪೂರ್ವದಲ್ಲಿ ಪಾಲರೂ ದಕ್ಷಿಣದಲ್ಲಿ ಚೋಳರೂ ಆ ಕಾಲದ ಪ್ರಮುಖ ರಾಜವಂಶಗಳು. ಅವರೆಲ್ಲರನ್ನೂ ಹಲವಾರು ಬಾರಿ ಹತ್ತಿಕ್ಕಿದ ಸಾಹಸ ರಾಷ್ಟ್ರಕೂಟರಿಗೆ ಸೇರಿದ್ದು. ಈ ಮಹತ್ತರ ಸಾಹಸಗಳಿಗೆ ಸುಶಿಕ್ಷಿತವಾದ ಕರ್ನಾಟಕ ಬಲ ಮುಖ್ಯ ಕಾರಣವಾಗಿತ್ತು. ರಾಜಕೀಯ ಮತ್ತು ಸೇನಾಬಲಗಳ ಇತಿಹಾಸದಲ್ಲಿ ಸಮಕಾಲೀನ ಭಾರತದ ಅಪ್ರತಿಮ ರಾಷ್ಟ್ರವಾಗಿತ್ತು. ಅರಬ್ಬೀ ಇತಿಹಾಸಕಾರ ಸುಲೇಮಾನ ಆ ಕಾಲದ ವಿಶ್ವದ ನಾಲ್ಕು ಬೃಹದ್ರಾಷ್ಟ್ರಗಳಲ್ಲಿ ಇದೂ ಒಂದೆಂದು ಹೇಳಿರುವುದೇ ಇವರ ಮಹತ್ತ್ವಕ್ಕೆ ಸಾಕ್ಷಿ. ಕರ್ಣಾಟಕರು ಯುದ್ಧವಿದ್ಯೆಯಲ್ಲಿ ಪರಿಣತರೆಂದೂ, ಸೇನಾನಿರ್ವಹಣದಲ್ಲಿ ಚತುರರೆಂದು ಆ ಕಾಲದ ಲೇಖಕನಾದ ರಾಜಶೇಖರ ಹೊಗಳಿದ್ದಾನೆ. ರಾಜರು ಸ್ವತಃ ಯುದ್ಧಗಳಲ್ಲಿ ಭಾಗವಹಿಸಿ ಸೈನಿಕರಿಗೆ ಪ್ರೋತ್ಸಾಹ ನೀಡುತ್ತಿದ್ದುದಲ್ಲದೆ ಶೌರ್ಯ ಧೈರ್ಯಗಳನ್ನು ಪ್ರದರ್ಶಿಸಿದ ಸಾಮಂತರಿಗೂ ದಳಪತಿಗಳಿಗೂ ಸೂಕ್ತ ಬಹುಮಾನಗಳನ್ನೂ ಐಶ್ವರ್ಯವನ್ನೂ ನೀಡುತ್ತಿದ್ದರು. ಇವರು ನಿರಂಕುಶಾಧಿಕಾರಿಗಳಾದಾಗ್ಯೂ ಅನೇಕ ಬಾರಿ ರಾಜಬಂಧುಗಳ ಮಂತ್ರಿ ಅಮಾತ್ಯರ ಸಲಹೆಗನುಗುಣವಾಗಿ ಯುದ್ಧ, ಆಡಳಿತಗಳನ್ನು ನಿರ್ವಹಿಸುತ್ತಿದ್ದರು. ಅವಿರತ ಯುದ್ಧಭಾಗಿಗಳಾಗಿದ್ದರೂ ಸಾಹಿತ್ಯ ಕಲಾಪ್ರೋತ್ಸಾಹರಾಗಿದ್ದು ದೇಶದ ಸರ್ವತೋಮುಖ ಪ್ರಗತಿಗೆ ಕಾರಣರಾದರು.

ರಾಷ್ಟ್ರಕೂಟರ ಕಾಲದಲ್ಲಿ ಯಾವುದೇ ರೀತಿಯ ಸಾಮಾಜಿಕ ಏರುಪೇರುಗಳಾದಂತೆ ಕಾಣುವುದಿಲ್ಲ. ಆದರೆ ಮತೀಯ, ಧಾರ್ಮಿಕ ರಂಗಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳೇರ್ಪಟ್ಟುವು. ಮತೀಯ ಭಾವನೆಗಳಲ್ಲಿ ವಿಶಾಲದೃಷ್ಟಿಯಿಂದ ಕೂಡಿದ್ದ ಈ ಸಾಮ್ರಾಟರು ಸರ್ವಧರ್ಮಸಮತೆಯನ್ನು ಆದರ್ಶವಾಗಿಟ್ಟುಕೊಂಡಿದ್ದರು. ರಾಷ್ಟ್ರಕೂಟ ದೊರೆಗಳು ತಮ್ಮ ವೈಯಕ್ತಿಕ ನಂಬಿಕೆಗನುಸಾರವಾಗಿ ವೈಷ್ಣವ ಅಥವಾ ಶೈವಧರ್ಮದ ಅನುಯಾಯಿಗಳಾಗಿರುತ್ತಿದ್ದು ವೈಷ್ಣವ ಸಂಕೇತವಾದ ಗರುಡ ಮತ್ತು ಶೈವ ಸಂಕೇತವಾದ ಮಹಾಯೋಗಿ ಶಿವನ ಮೂರ್ತಿಗಳನ್ನು ತಮ್ಮ ಲಾಂಛನವಾಗಿ ಉಪಯೋಗಿಸುತ್ತಿದ್ದರು. ಇವರ ಶಾಸನಗಳ ಮಂಗಳ ಶ್ಲೋಕಗಳಲ್ಲಿ ವಿಷ್ಣುಶಿವರಿಬ್ಬರನ್ನೂ ಸ್ತುತಿಸುತ್ತಾರೆ. ಈ ವಂಶದ ಪ್ರಸಿದ್ಧ ದೊರೆಯಾದ ಅಮೋಘವರ್ಷ ನೃಪತುಂಗ ಜೈನದೀಕ್ಷೆ ವಹಿಸಿ ಜೈನಧರ್ಮಕ್ಕೆ ವಿಶೇಷ ಪ್ರೋತ್ಸಾಹ ನೀಡಿದ. ಹಲವಾರು ಸಾಮಂತ ದಳಪತಿಗಳು ಜೈನಧರ್ಮೀಯರಾಗಿದ್ದರು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

‌ಲಾಲ್‌ಬಾಗ್‌

ಲಾಲ್ ಎಂದರೆ ಕೆಂಪು, ಬಾಗ್ ಎಂದರೆ ತೋಟ, ಒಟ್ಟಿಗೆ ಕರೆಯುವುದೇ ನಮ್ಮ ಲಾಲ್ ಬಾಗ್

ಒಂದು ಕಾಡಿನಲ್ಲಿ ಒಂದು ಕಿಲೋಮೀಟರ್ ನಡೆದು ಶಾಲೆಗೆ ಹೋಗುತ್ತಿರುವ ಹುಡುಗಿ.

ಒಂದು ಕಾಡಿನಲ್ಲಿ ಒಂದು ಕಿಲೋಮೀಟರ್ ನಡೆದು ಶಾಲೆಗೆ ಹೋಗುತ್ತಿರುವ ಹುಡುಗಿ.