in ,

ಜೈನ ರಾಜರ ಆಳ್ವಿಕೆಯಲ್ಲಿತ್ತು ಈಗೀನ ಕಾರ್ಕಳ

ಕಾರ್ಕಳ
ಕಾರ್ಕಳ

ಕಾರ್ಕಳ ಉಡುಪಿ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. ಕಾರ್ಕಳವು ಬೆಂಗಳೂರಿನಿಂದ ಸುಮಾರು ೩೬೦ ಕಿ. ಮೀ ದೂರದಲ್ಲಿದೆ. ಪಶ್ಚಿಮ ಘಟ್ಟದ ಬುಡದಲ್ಲಿರುವ ಈ ಊರು ಹಲವು ಶತಮಾನಗಳ ಹಿಂದೆ ಜೈನ ರಾಜರ ಆಳ್ವಿಕೆಯ ಕಾಲದಲ್ಲಿ ಪಾಂಡ್ಯ ನಗರಿ ಎಂದು ಪ್ರಸಿಧ್ದಿ ಪಡೆದಿತ್ತು. ಕಾಲಕ್ರಮೇಣ ಇಲ್ಲಿರುವ ಕರಿ ಬಂಡೆಗಳಿಂದ “ಕರಿಕಲ್ಲು” ಎಂದು ಪ್ರಸಿದ್ಧವಾಗಿತ್ತು. ಮುಂದೆ ‘ಕರಿಕಲ್ಲು’ ತುಳುವಿನಲ್ಲಿ ‘ಕಾರ್ಲ’ವೆಂದು ಮಾರ್ಪಟ್ಟು ಕನ್ನಡದಲ್ಲಿ ‘ಕಾರ್ಕಳ’ ಎಂದು ಹೆಸರಾಗಿದೆ. ೪೨ ಅಡಿ ಎತ್ತರದ ಏಕಶಿಲಾ ಗೊಮ್ಮಟೇಶ್ವರ ಮೂರ್ತಿ, ಚತುರ್ಮುಖ ಬಸದಿ ಮತ್ತು ಇತರ ಧಾರ್ಮಿಕ ಕ್ಷೇತ್ರಗಳ ಮೂಲಕ ಕಾರ್ಕಳವು ಪ್ರವಾಸಿ ಸ್ಥಳವಾಗಿ ಛಾಪು ಮೂಡಿಸಿದೆ.ಕಾರ್ಕಳದ ಇತಿಹಾಸದ ಬಗ್ಗೆ ೧೦ನೇ ಶತಮಾನದ ಆದಿಯಿಂದ ಹಲವು ಮಾಹಿತಿಗಳು ಲಭ್ಯವಾಗಿವೆ.

ಈ ಊರು ಜೈನರ ಕಾಲದಲ್ಲಿ ಪಾಂಡ್ಯ ನಗರಿ ಎಂದು ಪ್ರಸಿಧ್ದಿ ಪಡೆದಿತ್ತು. ಕಾರ್ಕಳದ ಆಸುಪಾಸಿನ ಪ್ರದೇಶದಲ್ಲಿ ಬಂಡೆಕಲ್ಲು ಹೇರಳವಾಗಿರುವುದರಿಂದ “ಕರಿಕಲ್ಲು” ಎಂದು ಜನಜನಿತವಾಗಿತ್ತು. ಇನ್ನೂ ಕೆಲವು ಮೂಲಗಳ ಪ್ರಕಾರ ಕಾರ್ಕಳದ ಮಧ್ಯಭಾಗದಲ್ಲಿರುವ ‘ಆನೆಕೆರೆ’ಯು ಹಿಂದೆ ‘ಕರಿ-ಕೊಳ’ ಎಂದು ಹೆಸರಾಗಿತ್ತೆಂದೂ, ಅದರಿಂದ ಕಾರ್ಕಳದ ಹೆಸರು ಊರಿಗೆ ಬಂತೆಂದೂ ತಿಳಿದುಬರುತ್ತದೆ.

ಜೈನ ರಾಜರ ಆಳ್ವಿಕೆಯಲ್ಲಿತ್ತು ಈಗೀನ ಕಾರ್ಕಳ
ಕಾರ್ಕಳ

ಕಾರ್ಕಳದಲ್ಲಿ ಬಹುಸಂಖ್ಯೆಯಲ್ಲಿರುವ ತುಳುವರು “ಕಾರ್ಲ” ಎಂದು ಕರೆಯುತ್ತಾರೆ ಹಾಗೆಯೇ, ಕೊಂಕಣಿ ಮಾತನಾಡುವ ಜನರು “ಕಾರ್ಕೊಳ್” ಎಂದು ಕರೆಯುತ್ತಾರೆ. ಕಾರ್ಕಳವು ಇಲ್ಲಿರುವ ಜೈನ ಬಸದಿಗಳು ಮತ್ತು ಗೊಮ್ಮಟೇಶ್ವರ ಮೂರ್ತಿಯಿಂದ “ಜೈನ ತೀರ್ಥ” ಎಂದೂ ಪ್ರಸಿದ್ದವಾಗಿದೆ.

ಕಾರ್ಕಳದಲ್ಲಿ ಜನಜೀವನ ಎಂದು ಆರಂಭವಾಯಿತು ಎಂಬುದಕ್ಕೆ ಅನಾದಿಕಾಲದ ಆಧಾರಗಳು ನಮಗೆ ಸಿಗುತ್ತಿಲ್ಲವಾದರೂ ಬೃಹತ್ ಶಿಲಾಯುಗಕ್ಕೆ ಕಾಲಿಟ್ಟಾಗ ಒಂದು ಸ್ಪಷ್ಟ ಚಿತ್ರ ದೊರೆಯುತ್ತದೆ. ತತ್ಸಂಬಂಧವಾದ ಹಲವಾರು ಪಳೆಯುಳಿಕೆಗಳು ಕಾಣಸಿಗುತ್ತವೆ. ಇಲ್ಲಿ ಹೆಸರಿಸಬಹುದಾವು ಗಳೆಂದರೆ ಗವಿಗಳು ಮತ್ತು ಸಮಾಧಿಗಳು. ಇಲ್ಲಿನ ಹಿರಿಯಂಗಡಿ ಬಳಿ ಇರುವ ಪರ್ಪಲೆ ಬೆಟ್ಟದ ಮಧ್ಯಭಾಗದಲ್ಲಿ ಒಂದು ಗವಿ ಇದೆ. ಪೂರ್ವಕ್ಕೆ ಮುಖವಿರುವ ಈ ಮುರಕಲ್ಲು ಗವಿ ಬೃಹತ್ ಶಿಲಾಯುಗದ್ದು. ಕಾಲದ ಪ್ರಭಾವದಿಂದಾಗಿ ಆದ ಹಲವಾರು ಬದಲಾವಣೆಗಳನ್ನು ನಾವು ಇಲ್ಲಿ ಕಾಣಬಹುದು. ಗವಿಯ ಮುಂದೆ ಕಿರಿದಾದ ಸಣ್ಣ ಕಣಿವೆ, ಇಲ್ಲೊಂದು ಅಷ್ಟೇ ಸಣ್ಣದಾದ ಝರಿ. ಇದು ಪ್ರಾಚೀನ ಕಾಲದಲ್ಲಿ ಮಾನವ ವಾಸ್ತವ್ಯಕ್ಕೆ ಅತ್ಯಂತ ಸೂಕ್ತವಾದ ಸ್ಥಳವಾಗಿತ್ತು. ಆಧುನಿಕ ಮಾನವನ ಸಂಪರ್ಕ ಹೊಂದಿರುವ ಈ ಗವಿ ಇದ್ದಿರಬಹುದಾದ ಪಳೆಯುಳಿಕೆಗಳನ್ನು ತನ್ನ ಗರ್ಭದಲ್ಲಿ ಸೇರಿಸಿಕೊಂಡಿದೆ. ಬೆಳುವಾಯಿ ಸಮೀಪದ ದರೆಗುಡ್ಡೆ ಮತ್ತು ಬೈಲೂರು ಸಮೀಪದ ಕಣಜಾರು ಬೆಟ್ಟ ಪ್ರದೇಶಗಳಲ್ಲಿ ಹೆಬ್ಬಂಡೆ ವಾಸ್ತವ್ಯದ ಕುರುಹುಗಳಿವೆ. ಇಲ್ಲಿ ಬೃಹತ್ ಶಿಲಾಯುಗಕ್ಕೂ ಹಿಂದಿನ ಕಾಲದ ಮಾನವ ವಾಸವಾಗಿದ್ದಿರಬಹುದು. ಸಾವಿರಾರು ವರ್ಷಗಳ ಘನಘೋರ ವರ್ಷಧಾರೆಯಿಂದ ಇಲ್ಲಿನ ಕುರುಹುಗಳು ನಾಶವಾಗಿವೆ. ರೆಂಜಾಳದ ಸಮೀಪ ಇರುವ ಬೋರುಕಟ್ಟೆ ಎಂಬ ಹಳ್ಳಿಯಲ್ಲಿ ಒಂದು ಬೃಹತ್ ಶಿಲಾ ಸಮಾಧಿ ಇದೆ. ಇದನ್ನು ಅಲ್ಲಿನ ಜನ “ಪಾಂಡವರಕಲ್ಲು” ಎಂದು ಕರೆಯುತ್ತಾರೆ. ಈ ಹೆಸರು ಸಮಾಧಿಯ ಪ್ರಾಚೀನತೆಯನ್ನು ಸೂಚಿಸುತ್ತದೆ ಅಷ್ಟೇ. ಜಿಲ್ಲೆಯ ಇತರೆಡೆಗಳಲ್ಲೂ ಪಾಂಡವರಕಲ್ಲು ಎಂದು ಕರೆಸಿಕೊಳ್ಳುವ ಸ್ಥಳಗಳಿವೆ.

ಬೋರುಕಟ್ಟೆ ಸಮಾಧಿಯು ಸಣ್ಣ ರಂಧ್ರದ ಸಮಾಧಿ. ಇದರ ಮೇಲೆ ತೆಳುವಾದ ಕಲ್ಲು ಚಪ್ಪಡಿಗಳ ಒಂದು ಚಪ್ಪರ ಇದೆ. ಮಾನವ ಆ ವೇಳೆಗೆ ಲೋಹದ ಮುಖ್ಯವಾಗಿ, ಕಬ್ಬಿಣದ ಉಪಯೋಗ ಪಡೆದಿದ್ದನೆಂಬುದಕ್ಕೆ ಇದು ಸಾಕ್ಷಿ. ಇಲ್ಲಿನ ಬೃಹತ್ ಶಿಲಾಯುಗದ ಸ್ಮಾರಕಗಳು ಸುಮಾರು ಕ್ರಿ. ಪೂ. 4ನೇಯ ಶತಮಾನ ಮತ್ತು ಅನಂತರದ ಕಾಲವೆಂದು ಅಂದಾಜಿಸಬಹುದು. ಆದರೆ ವೈಜ್ಞಾನಿಕವಾಗಿ ಉತ್ಖನನ ಕಾರ್ಯ ನಡೆಯುವವರೆಗೆ ಈ ಕಾಲವನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ.

ಅಲುಪರು ಕಾರ್ಕಳವನ್ನಾಳಿದವರಲ್ಲಿ ಮೊದಲಿಗರು. ತದನಂತರ ಸಂತರು ಆಳ್ವಿಕೆಯನ್ನು ಮುಂದುವರೆಸಿದರು. ಕಾರ್ಕಳ ಅಥವಾ ಪ್ರಾಚೀನ ಪಾಂಡ್ಯನಗರಿ, ಭೈರರಸ ಒಡೆಯರಿಂದ ಕ್ರಿ. ಶ. ೧೩-೧೬ನೇ ಶತಮಾನದಲ್ಲಿದ್ದ ಕಳಸ-ಕಾರ್ಕಳ ಸಾಮ್ರಾಜ್ಯದ ಕಾಲದಲ್ಲಿ ರಾಜಕೀಯ ಮತ್ತು ಸಾಂಸ್ಕೃತಿಕ ಮಹತ್ವವನ್ನು ಪಡೆಯಿತು. ಕಾರ್ಕಳದ ರಾಜಮನೆತನ ಹೊಯ್ಸಳರ ಕಾಲದಲ್ಲಿ ಪ್ರಾಧಾನ್ಯ ಪಡೆದುಕೊಂಡಿತು. ಮುಂದೆ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ತನ್ನ ವೈಭವವನ್ನು ಇನ್ನೂ ವಿಸ್ತರಿಸಿಕೊಂಡಿತು.

ರಾಜ್ಯವು ಶೃಂಗೇರಿ, ಕೊಪ್ಪ, ಬಾಳೆಹೊನ್ನೂರು, ಮೂಡಿಗೆರೆ ಹಾಗೂ ಈಗಿನ ಕಾರ್ಕಳ ತಾಲೂಕನ್ನೊಳಗೊಂಡು ತನ್ನ ವಿಸ್ತಾರವನ್ನು ಹೆಚ್ಚಿಸಿಕೊಂಡಿತು. ರಾಜಮನೆತನವು ಬಹಳ ಶ್ರೀಮಂತವಾಗಿದ್ದು ಸಾಕಷ್ಟು ದೊಡ್ಡದಾದ ಸೈನ್ಯವನ್ನು ಹೊಂದಿತ್ತು. ಭೈರರಸರ ಕಾಲದಲ್ಲಿ ಕಾರ್ಕಳವು ಜೈನಕ್ಷೇತ್ರವಾಗಿ ಮಾರ್ಪಟ್ಟಿತು. ಅರಸರು ಸಾಕಷ್ಟು ಬಸದಿಗಳನ್ನೂ ಕೆರೆಗಳನ್ನೂ ಕಟ್ಟಿಸಿದರು. ಅರಸರು ಕಟ್ಟಿಸಿದ ಬಸದಿಗಳು ಸುಮಾರು ೧೮ರಷ್ಟಿವೆ.

ಜೈನ ರಾಜರ ಆಳ್ವಿಕೆಯಲ್ಲಿತ್ತು ಈಗೀನ ಕಾರ್ಕಳ
ಕಾರ್ಕಳದ ಬಾಹುಬಲಿ

ಕಾರ್ಕಳದ ಬಾಹುಬಲಿ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಬೀರ ಕಲ್ಕುಡ- ಪ್ರಸ್ತುತ ಕಲ್ಕುಡ ಎಂಬ ನಾಮದೇಯದಿಂದ ದೈವಗಳಾಗಿ ತುಳುನಾಡಿನಲ್ಲಿ ಪೂಜಿಸಲ್ಪಡುತ್ತದೆ. ಇವರ ತಂದೆ ಶಂಬು ಕಲ್ಕುಡ ಶ್ರವಣಬೆಳಗೊಳದ ಗೊಮ್ಮಟ ವಿಗ್ರಹವನ್ನು ಕೆತ್ತಿದ್ದಾರೆ ಎಂದು ತುಳುನಾಡಿನ ಶಾಸನಗಳು ತಿಳಿಸುತ್ತವೆ.

ಕಾರ್ಕಳವು ಜೈನಕಾಶಿ ಎಂದೇ ಖ್ಯಾತಿ ಪಡೆದಿದ್ದು ಇಲ್ಲಿ ಜೈನಧರ್ಮೀಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಸುಮಾರು ೧೮ ಜೈನ ಬಸದಿಗಳು ಕಾರ್ಕಳದಲ್ಲಿವೆ. ಅವುಗಳಲ್ಲಿ ಚತುರ್ಮುಖ ಬಸದಿಯು ತನ್ನ ವಾಸ್ತುಶಿಲ್ಪದ ಹಿರಿಮೆಯಿಂದಾಗಿ ಪ್ರಸಿದ್ಧಿ ಪಡೆದಿದೆ. ಕಾರ್ಕಳದಲ್ಲಿರುವ ೪೨ ಅಡಿ ಎತ್ತರದ ಬಾಹುಬಲಿ ಪ್ರತಿಮೆಯು ರಾಜ್ಯದಲ್ಲಿಯೇ ಎರಡನೇ ಅತಿ ಎತ್ತರದ ಏಕಶಿಲಾ ಪ್ರತಿಮೆಯಾಗಿದೆ. ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಇಲ್ಲಿ ಮಹಾಮಸ್ತಕಾಭಿಷೇಕ ನಡೆಯುತ್ತದೆ.

ಕಾರ್ಕಳ ತಾಲೂಕಿನಲ್ಲಿ ಹಿಂದೂ-ಕ್ರೈಸ್ತ-ಮುಸಲ್ಮಾನ-ಜೈನ ಧರ್ಮಗಳು ಪಾಲಿಸಲ್ಪಡುತ್ತವೆ. ಕಾರ್ಕಳದ ಅನಂತಪದ್ಮನಾಭ ದೇವಸ್ಥಾನ, ಪಡುತಿರುಪತಿ ಎಂದೇ ಖ್ಯಾತವಾದ ವೆಂಕಟರಮಣ ದೇವಳ ಕಾರ್ಕಳ ಪೇಟೆಯ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಪ್ರಮುಖವಾದವು. ಕಾರ್ಕಳದ ಅತ್ತೂರಿನ ಚರ್ಚ್ ಸುತ್ತಮುತ್ತಲಿನ ಜಿಲ್ಲೆಗಳಲ್ಲಿಯೇ ಕ್ರೈಸ್ತರಲ್ಲಿ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದೆ.

ತುಳುನಾಡಿನ ಉತ್ತರ ದಿಕ್ಕಿನಲ್ಲಿ ಕಾರ್ಕಳ ತಾಲೂಕು ಗಡಿಯಾಗಿದ್ದು ತುಳುವೇ ಇಲ್ಲಿನ ಪ್ರಮುಖ ಆಡುಭಾಷೆಯಾಗಿದೆ. ಸಂಖ್ಯೆಯಲ್ಲಿ ಹೆಚ್ಚಿರುವ ತುಳುವರು ಕನ್ನಡವನ್ನೂ ಬಲ್ಲವರಾಗಿದ್ದು ಕನ್ನಡವು ಇಲ್ಲಿ ಪ್ರಮುಖ ಭಾಷೆಯಾಗಿದೆ. ಕಾರ್ಕಳ ಪಟ್ಟಣದಲ್ಲಿ ಕೊಂಕಣಿ ಭಾಷಿಕರು ಸಾಕಷ್ಟು ಸಂಖ್ಯೆಯಲ್ಲಿ ವಾಸವಾಗಿರುತ್ತಾರೆ. ಇತರ ಭಾಷೆಗಳಲ್ಲಿ ಮರಾಠಿ, ಉರ್ದು, ಬ್ಯಾರಿ ಭಾಷೆಗಳು ಪ್ರಮುಖವಾಗಿರುತ್ತವೆ.

ಹುಲಿವೇಷವು ಇಲ್ಲಿನ ಆಚರಣೆಗಳಲ್ಲಿ ಒಂದಾಗಿದ್ದು ದಸರಾ ಮತ್ತು ಶ್ರೀಕೃಷ್ಣಜನ್ಮಾಷ್ಟಮಿ ಸಮಯದಲ್ಲಿ ಇಲ್ಲಿ ಆಚರಿಸಲಾಗುತ್ತದೆ. ತುಳುನಾಡಿನ ಬಹುಪ್ರಮುಖ ಆಚರಣೆಯಾದಂತಹ ಭೂತ ಕೋಲ-ನೇಮಗಳನ್ನು ಇಲ್ಲಿ ಪಾಲಿಸಲಾಗುತ್ತದೆ. ಕಂಬಳ ಕೋಣಗಳನ್ನು ಓಡಿಸುವ ಸ್ಪರ್ಧೆ ತುಂಬ ಜನಪ್ರಿಯ.

ಧನ್ಯವಾದಗಳು

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

ಶಂಕರನಾಗ್

ಆಟೋ ಶಂಕರ್ ಯಾರಿಗೆ ತಾನೇ ಗೊತ್ತಿಲ್ಲ?ನಟ, ನಿರ್ದೇಶಕ ಶಂಕರನಾಗ್

ಅಪ್ಪು ಅವರ ಈ ಫೋಟೋ ಹಿಂದಿರುವ ಸತ್ಯ ಗೊತ್ತಾದ್ರೆ ನಿಮಗೂ ಕಣ್ಣೀರು ಬರುತ್ತೆ.

ಅಪ್ಪು ಅವರ ಈ ಫೋಟೋ ಹಿಂದಿರುವ ಸತ್ಯ ಗೊತ್ತಾದ್ರೆ ನಿಮಗೂ ಕಣ್ಣೀರು ಬರುತ್ತೆ.