in

ತ್ರಿಮೂರ್ತಿಗಳ ಅಂಶಗಳನ್ನು ತನ್ನ ಮಕ್ಕಳಾಗಿಸಿಕೊಂಡ ಅನಸೂಯಾ, ತ್ರಿಮೂರ್ತಿಗಳ ಅವತಾರ ದತ್ತಾತ್ರೇಯ

ತ್ರಿಮೂರ್ತಿಗಳ ಅವತಾರ ದತ್ತಾತ್ರೇಯ
ತ್ರಿಮೂರ್ತಿಗಳ ಅವತಾರ ದತ್ತಾತ್ರೇಯ

ದತ್ತಾತ್ರೇಯನು ಹಿಂದೂಗಳಿಂದ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಅವತಾರನಾದ ದೇವರೆಂದು ಪರಿಗಣಿಸಲ್ಪಡುತ್ತಾನೆ. ದತ್ತ ಶಬ್ದದ ಅರ್ಥ “ಕೊಟ್ಟಿದ್ದು”, ತ್ರಿಮೂರ್ತಿಗಳು ತಮ್ಮನ್ನು ತಾವೇ ಋಷಿ ದಂಪತಿಗಳಾದ ಅತ್ರಿ ಮತ್ತು ಅನಸೂಯೆಯರಿಗೆ ಪುತ್ರನ ರೂಪದಲ್ಲಿ ಅರ್ಪಿಸಿದ್ದರಿಂದ ದತ್ತನೆಂದು ಕರೆಯಲ್ಪಡುತ್ತಾನೆ. ಅವನು ಅತ್ರಿಯ ಪುತ್ರ, ಹಾಗಾಗಿ “ಆತ್ರೇಯ”ನೆಂಬ ಹೆಸರು.

ದತ್ತಾತ್ರೇಯ ಸ್ವಾರೋಚಿಷ ಮನ್ವಂತರದ ಸಪ್ತರ್ಷಿಗಳಲ್ಲಿ ಒಬ್ಬ. ದೂರ್ವಾಸ ಮುನಿ ಈತನ ಸಹೋದರ. ನಿಮಿ ಋಷಿ ಈತನ ಮಗ. ಏಳನೆಯ ದಿವಸದಲ್ಲಿಯೇ ಈತ ತಾಯಿಯ ಗರ್ಭದಲ್ಲಿ ಪ್ರಕಟವಾಗಿ ತಂದೆಗೆ ಸಹಾಯ ಮಾಡಿದನೆಂದು ಕಥೆಯಿದೆ.

ತ್ರಿಮೂರ್ತಿಗಳ ಅಂಶಗಳನ್ನು ತನ್ನ ಮಕ್ಕಳಾಗಿಸಿಕೊಂಡ ಅನಸೂಯಾ, ತ್ರಿಮೂರ್ತಿಗಳ ಅವತಾರ ದತ್ತಾತ್ರೇಯ
ತ್ರಿಮೂರ್ತಿಗಳ ಅಂಶಗಳನ್ನು ತನ್ನ ಮಕ್ಕಳಾಗಿಸಿಕೊಂಡ ಅನಸೂಯಾ

ದತ್ತಾತ್ರೇಯನ ಜನನವೃತ್ತಾಂತ ಹೀಗಿದೆ. ಅತ್ರಿಮುನಿ ಸಂತಾನಾರ್ಥವಾಗಿ ಉಗ್ರ ತಪಸ್ಸು ಮಾಡಿದ. ಈತನ ತಪಸ್ಸಿಗೆ ಮೆಚ್ಚಿ ತ್ರಿಮೂರ್ತಿಗಳು ದರ್ಶನ ನೀಡಿದರು. ತಮ್ಮ ಒಬ್ಬೊಬ್ಬರ ಅಂಶದಿಂದಲೂ ಒಬ್ಬೊಬ್ಬ ಮಗ ಹುಟ್ಟುವನೆಂದು ವರ ನೀಡಿದರು. ಅದರಂತೆ ಬ್ರಹ್ಮನ ಅಂಶದಿಂದ ಚಂದ್ರನೂ ವಿಷ್ಣುವಿನ ಅಂಶದಿಂದ ದತ್ತಾತ್ರೇಯನೂ ಶಿವನ ಅಂಶದಿಂದ ದುರ್ವಾಸನೂ ಜನಿಸಿದರು. ಕಾರ್ತವೀರ್ಯ, ಪ್ರಹ್ಲಾದ ಮೊದಲಾದವರಿಗೆ ದತ್ತಾತ್ರೇಯ ಜ್ಞಾನೋಪದೇಶ ಮಾಡಿದ. ಈತ ಬ್ರಹ್ಮಚಾರಿಯೆಂದು ಹೇಳಲಾಗಿದೆ.

ದೇವತೆಗಳು ರಾಕ್ಷಸರ ಹಿಂಸೆಯನ್ನು ತಡೆಯಲಾರದೆ ದತ್ತಾತ್ರೇಯನಲ್ಲಿ ಮೊರೆಯಿಟ್ಟಾಗ ಅವರಿಗೆ ತನ್ನ ಆಶ್ರಮದಲ್ಲಿ ಈತ ಆಶ್ರಯ ಕೊಟ್ಟ. ರಾಕ್ಷಸರು ಹೊಂಚು ಹಾಕಿ ಈತನ ಆಶ್ರಮದಲ್ಲಿದ್ದ ಲಕ್ಷ್ಮಿಯನ್ನು ಅಪಹರಿಸಿದರು. ಆಗ ಈತ ತನ್ನ ತಪೋಮಹಿಮೆಯಿಂದ ರಾಕ್ಷಸರನೆಲ್ಲ ನಾಶ ಮಾಡಿದ. ಈ ವಿಚಾರ ಭಾಗವತ ಹಾಗೂ ಮಾರ್ಕಂಡೇಯ ಪುರಾಣಗಳಲ್ಲಿ ಉಲ್ಲೇಖಿತವಾಗಿದೆ.

ಮುಂಬಯಿ-ಮದ್ರಾಸು ರೈಲ್ವೆಮಾರ್ಗದಲ್ಲಿರುವ ಗಾಣಗಾಪುರ ಪ್ರಸಿದ್ಧ ದತ್ತಕ್ಷೇತ್ರವೆನಿಸಿದೆ. ಈ ಕ್ಷೇತ್ರದ ಪಕ್ಕದಲ್ಲಿ ಭೀಮಾನದಿ ಹರಿಯುತ್ತಿದೆ. ಇಲ್ಲಿ ದತ್ತಾತ್ರೇಯನ ಸಗುಣ ಪಾದುಕೆಗಳಿವೆ ಎನ್ನಲಾಗಿದೆ. ಪ್ರತಿ ಹುಣ್ಣಿಮೆಯಲ್ಲಿಯೂ ಇಲ್ಲಿ ಉತ್ಸವವಿರುತ್ತದೆ.

ದತ್ತಾತ್ರೇಯ ಎಂದಾಗ ನೆನಪಾಗುವುದು ಇಡೀ ಸಮಷ್ಟಿಯನ್ನೇ ತನ್ನ ಗುರುವೆಂದು ಭಾವಿಸಿದ ಶ್ರೇಷ್ಠ ಅರಿವಿನ ಭಾವ.

ದತ್ತ’ ಮತ್ತು ‘ ಆತ್ರೇಯ’ ಎರಡು ಪದಗಳು ಸೇರಿದ ದತ್ತಾತ್ರೇಯ ಆಗಿದೆ. ಅಂದರೆ ದತ್ತನು ಅತ್ರಿಯ ಮಗ ಆತ್ರೇಯ. ದತ್ತ ಎಂದರೆ ಕೊಡುವುದು ಎಂದರ್ಥ. ಇಲ್ಲಿ ದತ್ತನು ತನ್ನನ್ನು ತಾನೇ ಅತ್ರಿ-ಅನುಸೂಯರಿಗೆ ಕೊಟ್ಟುಕೊಂಡು ದತ್ತನಾದನು. ಅತ್ರಿ ಒಬ್ಬ ಋಷಿ. ಈತ ಬ್ರಹ್ಮನ ಏಳು ಮಕ್ಕಳಲ್ಲಿ ಒಬ್ಬ. ಈ ಜಗತ್ತಿನ ಸೃಷ್ಟಿಗಾಗಿ ತಪಸ್ಸು ಮಾಡುತ್ತಿದ್ದವನು. ಈತನ ಹೆಂಡತಿ ಅನಸೂಯೆ ಮಹಾ ಪತಿವ್ರತೆ. ಪ್ರತಿಷ್ಠಾನದಲ್ಲಿ ಇಂಥಹದೇ ಇನ್ನೊಬ್ಬ ಪತಿವ್ರತೆ ಇದ್ದಳು. ಅವಳ ಹೆಸರು ಸುಮತಿ. ಅವಳ ಗಂಡ ಕೌಶಿಕ. ಅವನು ತಪ್ಪುದಾರಿ ಹಿಡಿದು ಸುಮತಿಯನ್ನು ಬಿಟ್ಟು ಹೊರಟು ಹೋಗುತ್ತಾನೆ. ಹಾಗಿರಲು ಒಮ್ಮೆ ವಿಪರೀತ ಖಾಯಿಲೆ ಬಂದು ಮೈಯಲ್ಲಾ ಹುಣ್ಣಾಗುತ್ತದೆ. ಮತ್ತೆ ಸುಮತಿಯ ಬಳಿಗೇ ಬರುತ್ತಾನೆ. ಅವಳು ತುಂಬಾ ಒಳ್ಳೆಯವಳು ಕ್ಷಮಾಶೀಲೆ. ಅವನ ಹುಣ್ಣುಗಳನ್ನು ತೊಳೆದು ಔಷಧ ಹಾಕಿ, ಒಳ್ಳೆಯ ಆಹಾರ ಕೊಡುತ್ತಾಳೆ. ಅವನಿಗೆ ನಡೆಯಲೂ ಆಗದಿದ್ದಾಗ ಒಂದು ಸಂಜೆ ಸುಮತಿ ಅವನನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು ಹೊರಡುತ್ತಾಳೆ. ಇದೇ ಸಮಯದಲ್ಲಿ ಆ ಊರಿನಲ್ಲಿ ಘಟನೆಯೊಂದು ನಡೆದಿತ್ತು. ದೊಡ್ಡ ಅಪರಾಧ ಮಾಡಿದವನೊಬ್ಬನಿಗೆ ಮರಣದಂಡನೆ ವಿಧಿಸಿದ್ದರು. ಆದರೆ ಆ ಅಪರಾಧಿ, ತಪ್ಪಿಸಿಕೊಂಡು ಪರಾರಿಯಾಗುತ್ತಾನೆ. ಅಪರಾಧಿಯಂತೆ ಕಂಡ ಇನ್ನೊಬ್ಬನನ್ನ ರಾಜಭಟರು ಕರೆತಂದು ರಾಜನ ಎದುರು ನಿಲ್ಲಿಸಿದಾಗ ಹಿಂದು ಮುಂದು ಆಲೋಚಿಸದೇ ರಾಜ ಅವನ್ನು ಶೂಲಕ್ಕೇರಿಸುವಂತೆ ಅಪ್ಪಣೆ ಮಾಡುತ್ತಾನೆ. ರಾಜಾಜ್ಞೆಯಂತೆ ಆತನನ್ನು ಶೂಲಕ್ಕೆ ಏರಿಸಲಾಗುತ್ತದೆ. ಆದರೆ ಆತ ನಿಜವಾದ ಅಪಾರಾಧಿಯೇ ಅಲ್ಲ. ಆತ ಮಾಂಡವ್ಯನೆಂಬ ಋಷಿ. ಆತನ ಯೋಗಬಲದಿಂದ ಶೂಲದ ಮೇಲೆ ಸಾಯದೇ ನೇತಾಡುತ್ತಿರುತ್ತಾನೆ.

ಅದೇ ಮಾರ್ಗವಾಗಿ ಪತಿಯನ್ನು ಹೊತ್ತು ಸುಮತಿ ಬರುವಾಗ ಕತ್ತಲೆಯಲ್ಲಿ ಕೌಶಿಕನ ಕಾಲು ಶೂಲಕ್ಕೆ ತಾಗುತ್ತದೆ. ಇದರಿಂದಕುಪಿತಗೊಂಡ ಋಷಿ “ಈ ಶೂಲಕ್ಕೆ ಕಾಲು ತಾಗಿಸಿಕೊಂಡವನು ಸೂರ್ಯ ಹುಟ್ಟಿದೊಡನೆ ಸಾಯಲಿ” ಎಂದು ಶಪಿಸುತ್ತಾನೆ. ಇದನ್ನು ಕೇಳಿಸಿಕೊಂಡ ಸುಮತಿ ಪತಿಯೇ ಸರ್ವಸ್ವ ಎಂದು ನಂಬಿದ ಆಕೆ “ಎಲೈ ಸೂರ್ಯನೇ, ನೀನು ಉದಯಿಸಬೇಡ. ನನ್ನ ಮಾತು ಮೀರಿದರೆ ನೀನು ಸುಟ್ಟು ಬೀಳುವೆ” ಎನ್ನುತ್ತಾಳೆ. ಪತಿವ್ರತೆಯ ಶಕ್ತಿ ಮಹತ್ತಾದುದು. ಅವಳ ಶಾಪಕ್ಕೆ ಹೆದರಿ ಸೂರ್ಯ ಹುಟ್ಟಲೇ ಇಲ್ಲ. ಜಗತ್ತೆಲ್ಲ ಕತ್ತಲಾಯಿತು. ಗಿಡ ಮರ ಬಳ್ಳಿಗಳು ಬೆಳೆಯುವುದು ನಿಂತು ಹೋಯಿತು. ಎಲ್ಲಾ ಕೆಲಸ ಕಾರ್ಯಗಳು ನಿಂತು ಹೋದವು. ಜನರ ಸಂಕಷ್ಟ ನೋಡಿ ದೇವತೆಗಳಿಗೆ ಮರುಕ ಹುಟ್ಟಿತು. ಅವರು ಈ ಕಷ್ಟವನ್ನು ನಿವಾರಿಸುವಂತೆ ಬ್ರಹ್ಮನಲ್ಲಿ ಮೊರೆಹೋದರು. ಅದಕ್ಕೆ ಬ್ರಹ್ಮ ಪತಿವ್ರತೆಯು ಶಾಪವಿತ್ತಿದ್ದರಿಂದ ಆಕೆಯ ಬಳಿಗೆ ಹೋಗೋಣ ಎನ್ನುತ್ತಾನೆ. ಬ್ರಹ್ಮಾದಿ ದೇವತೆಗಳೆಲ್ಲ ಪ್ರತಿಷ್ಠಾನಗರದ ಬಳಿ ಇದ್ದ ಅತ್ರಿ ಋಷಿಯ ಆಶ್ರಮದ ಬಳಿ ಬರುತ್ತಾರೆ. ಅನುಸೂಯಾ ದೇವಿಯನ್ನು ಕಂಡು ವಂದಿಸುತ್ತಾರೆ. ಋಷಿ ದಂಪತಿಗಳಿಗೆ ಆಶ್ಚರ್ಯ. ಬ್ರಹ್ಮ, ಇಂದ್ರ ಮೊದಲಾದ ದೇವತೆಗಳು ಇಳಿದು ಬಂದಿದ್ದಾರೆಂದು. ಕಾರಣ ಕೇಳುವ ಮೊದಲೇ “ತಾಯಿ, ಕೌಶಿಕನ ಪತ್ನಿ ಸುಮತಿಯ ಶಾಪದಿಂದ ಲೋಕವೆಲ್ಲ ಅಸ್ತವ್ಯಸ್ತವಾಗಿದೆ. ಜನರು, ಪಶು ಪಕ್ಷಿಗಳು ಹಾಹಾಕಾರ ಮಾಡುತ್ತಿವೆ. ಆದ್ದರಿಂದ ನೀನು ಪ್ರಸನ್ನಳಾಗಿ ಸುಮತಿಗೆ ತಿಳಿ ಹೇಳಬೇಕು. ಇದರಿಂದ ನಾವು ಉಪಕೃತರಾಗುವೆವು” ಎನ್ನುತ್ತಾರೆ. ಅತ್ರಿ ಅನಸೂಯೆಯರು ದೇವತೆಗಳೊಡನೆ ಸುಮತಿಯ ಮನೆಗೆ ತೆರಳುತ್ತಾರೆ ಮತ್ತು ತಾವು ಬಂದ ಕಾರಣವನ್ನು ತಿಳಿಸುತ್ತಾರೆ. ‘ಇದು ದೇವಕಾರ್ಯ ನೀನು ಮಾಡಿಕೊಡಬೇಕು. ಸೂರ್ಯನಿಗೆ ಕೊಟ್ಟ ಶಾಪವನ್ನು ಹಿಂದೆ ತೆಗೆದುಕೊಂಡು ಲೋಕವನ್ನು ಉಳಿಸು’ ಎನ್ನುತ್ತಾರೆ. ಅದಕ್ಕೆ ಸುಮತಿ, “ನಿಜ ಆದರೆ ಸೂರ್ಯನು ಉದಯಿಸಿದರೆ ನನ್ನ ಗಂಡನು ಮರಣ ಹೊಂದುತ್ತಾನೆ. ಆತ ಹೋದರೆ ನನ್ನ ಸರ್ವಸ್ವವೇ ಹೋದ ಹಾಗೆ. ಶಾಪವನ್ನು ಹಿಂದೆ ತೆಗೆದುಕೊಳ್ಳಲಾರೆ” ಎಂದು ಬಿಟ್ಟಳು. ಆಗ ಅನಸೂಯ, ತಂಗಿ ಸುಮತಿ ನಿನ್ನ ಶಾಪವನ್ನು ಹಿಂಪಡೆ. ನಾನು ನನ್ನ ಶಕ್ತಿಯಿಂದ ನಿನ್ನ ಗಂಡನನ್ನು ಮತ್ತೆ ಬದುಕಿಸಿ ಕೊಡುವೆ” ಎಂದಳು. ಆಗ ಸುಮತಿ ಶಾಪವನ್ನು ಹಿಂಪಡೆಯುತ್ತಾಳೆ. ಅನಸೂಯ ಕೊಟ್ಟ ಮಾತಿನಂತೆ ಮತ್ತೆ ಕೌಶಿಕನನ್ನು ಬದುಕಿಸುತ್ತಾಳೆ. ಎಲ್ಲರಿಗೂ ಸಂತೋಷವಾಗುತ್ತದೆ. ದೇವತೆಗಳು ಅನಸೂಯೆಯನ್ನು ಹೊಗಳಿ ಕೊಂಡಾಡುತ್ತಾರೆ. ಮಾತೆ ನೀನು ದೇವಕಾರ್ಯವನ್ನು ಮಾಡಿಕೊಟ್ಟೆ. ನಾವು ಸಂತುಷ್ಟರಾಗಿದ್ದೇವೆ ಬೇಕಾದ ವರ ಬೇಡಿಕೋ ಎನ್ನುತ್ತಾರೆ. ಆಗ ಅನಸೂಯೆ, ಹರಿ ಹರ ಬ್ರಹ್ಮರು ನನ್ನ ಮಕ್ಕಳಾಗಲಿ ಎಂದು ಬೇಡಿಕೊಳ್ಳುತ್ತಾಳೆ. ಹಾಗೆಯೇ ಆಗಲಿ ಎಂದು ದೇವತೆಗಳೂ ಹರಸುತ್ತಾರೆ. ಅದರಂತೆ ಬ್ರಹ್ಮನ ಅಂಶದಲ್ಲಿ ಚಂದ್ರನೂ, ವಿಷ್ಣುವಿನ ಅಂಶದಲ್ಲಿ ದತ್ತನೂ, ಈಶ್ವರನ ಅಂಶದಿಂದ ದುರ್ವಾಸನೂ ಹುಟ್ಟಿದರು. ಹೀಗೆ ಅನಸೂಯಾದೇವಿ ಮೂವರು ಮಕ್ಕಳನ್ನು ಪಾಲಿಸಿದಳು. ಮಕ್ಕಳು ಬೆಳೆದು ದೊಡ್ಡವರಾದರು. ನಂತರ ತಂದೆ ತಾಯಿಯರ ಅಪ್ಪಣೆ ಪಡೆದು ಚಂದ್ರ ಚಂದ್ರಮಂಡಲಕ್ಕೆ ಹೋದನು. ದುರ್ವಾಸನು ನೆನೆದಾಗ ಬರುವೆನೆಂದು ತಪಸ್ಸಿಗೆ ಹೋದನು. ದತ್ತನು ತಂದೆ ತಾಯಿಯರ ಸೇವೆಯಲ್ಲೇ ಉಳಿದನು.

ತ್ರಿಮೂರ್ತಿಗಳ ಅಂಶಗಳನ್ನು ತನ್ನ ಮಕ್ಕಳಾಗಿಸಿಕೊಂಡ ಅನಸೂಯಾ, ತ್ರಿಮೂರ್ತಿಗಳ ಅವತಾರ ದತ್ತಾತ್ರೇಯ
ತ್ರಿಮೂರ್ತಿಗಳ ಅವತಾರ ದತ್ತಾತ್ರೇಯ

ಈ ದತ್ತನಲ್ಲೆ ಚಂದ್ರ, ದುರ್ವಾಸರ ಅಂಶವೂ ಒಳಗೊಂಡಿತ್ತು. ಆದರಿಂದಲೇ ಆತನಿಗೆ ಮೂರು ಮುಖ, ಆರು ಕೈ. ಕೆಳಗಿನ ಕೈಗಳಲ್ಲಿ ಮಾಲೆ, ಕಮಂಡಲ, ಮಧ್ಯದ ಕೈಗಳಲ್ಲಿ ಡಮರು, ತ್ರಿಶೂಲ, ಮೇಲಿನ ಕೈಗಳಲ್ಲಿ ಗದಾ, ಚಕ್ರ, ಕಾವಿಬಟ್ಟೆಯನ್ನು ತೊಟ್ಟು, ಜಡೆ, ವಿಭೂತಿಗಳಿಂದ ಅಲಂಕೃತನಾಗಿದ್ದನು. ಆತ ಹುಟ್ಟಿದ್ದು ಮಾರ್ಗಶೀರ್ಷ ಮಾಸದ ಶುಕ್ಲ ಪಕ್ಷ ಚತುದರ್ಶಿ. ಆ ದಿನದಂದೇ ಪ್ರತಿ ವರ್ಷ “ದತ್ತ ಜಯಂತಿ” ಆಚರಿಸುವವರು. ದತ್ತಾತ್ರೇಯನ ಚಿತ್ರಣದಲ್ಲಿ ಹಸುವೊಂದಿದೆ. ಅದೇ ಕಾಮಧೇನು. ಆತನ ಹಿಂದೆ ದೊಡ್ಡ ಮರವಿದೆ. ಅದೇ ಕಲ್ಪವೃಕ್ಷ. ನಾಲ್ಕು ನಾಯಿಗಳಿವೆ. ಅವೇ ನಾಲ್ಕು ವೇದಗಳು. ಹೀಗೆ ದತ್ತಾತ್ರೇಯನ ಮೂರ್ತಿ ತ್ಯಾಗ, ಭಕ್ತಿ, ಜ್ಙಾನ, ಅನುಕಂಪಗಳ ಸಾಕಾರ ಮೂರ್ತಿಯಾಗಿದೆ. ನಮ್ಮ ದೇಶದ ನೈರುತ್ಯ ಭಾಗದಲ್ಲಿ ಗುಜರಾತ್ ರಾಜ್ಯದಲ್ಲಿರುವ ಸಸ್ಯಗಿರಿ ದತ್ತಾತ್ರೇಯನ ವಾಸಸ್ಥಾನವಾಗಿದೆ. ಇದು ರಮ್ಯವಾದ ಬೆಟ್ಟ ಪ್ರದೇಶ, ಅನೇಕ ಗವಿಗಳು, ಕಂದರಗಳು ಅಲ್ಲಿವೆ. ಹೆಮ್ಮರಗಳು ಬೆಳೆದು ನಿಂತಿವೆ. ಇಂಥ ಪ್ರಕೃತಿ ರಮ್ಯಸ್ಥಾನದಲ್ಲಿ ದತ್ತನ ಆಶ್ರಮ ಇದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕನ್ನಡದ ಖ್ಯಾತ ಖಳನಟ ಅರೆಸ್ಟ್.

ಕನ್ನಡದ ಖ್ಯಾತ ಖಳನಟ ಅರೆಸ್ಟ್.

ಮೇ 6 ಶುಕ್ರವಾರ 6 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಲಕ್ಷ್ಮೀದೇವಿ ಕೃಪೆಯಿಂದ!

ಮೇ 6 ಶುಕ್ರವಾರ 6 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಲಕ್ಷ್ಮೀದೇವಿ ಕೃಪೆಯಿಂದ!