in ,

ವೀರವನಿತೆ ಒನಕೆ ಓಬವ್ವ

ಒನಕೆ ಓಬವ್ವ
ಒನಕೆ ಓಬವ್ವ

18 ನೇ ಶತಮಾನದಲ್ಲಿ, ಚಿತ್ರದುರ್ಗ ಕೋಟೆಯು ಮದಕರಿ ನಾಯಕ ರ ಆಳ್ವಿಕೆಯಲ್ಲಿತ್ತು. ಚಿತ್ರದುರ್ಗದ ಇತಿಹಾಸದಲ್ಲಿ ಇದು ಒರಟು ಸಮಯ. ಹೈದರ್ ಆಲಿಯು ಆ ಕಾಲದ ಅತ್ಯಂತ ಶಕ್ತಿಶಾಲಿ ಮಿಲಿಟರಿ ನಾಯಕರಲ್ಲಿ ಒಬ್ಬನಾಗಿದ್ದನು.
ಒನಕೆ ಓಬವ್ವ ಕರ್ನಾಟಕದ ಚಿತ್ರದುರ್ಗ ಸಾಮ್ರಾಜ್ಯದಲ್ಲಿ ಒಬ್ಬ ಧೀರ ಮಹಿಳೆ, ಅವರು ಹೈದರಾಲಿಯ ಸೈನ್ಯದೊಂದಿಗೆ ಏಕಾಂಗಿಯಾಗಿ ಹೋರಾಡಿದರು.

ಒನಕೆ ಓಬವ್ವ ಚಿತ್ರದುರ್ಗದ ಹೆಸರನ್ನು ಕೇಳಿದ ಒಡನೆಯೇ ಅಲ್ಲಿನ ಏಳುಸುತ್ತಿನ ಕೋಟೆಯ ನೆನಪಾಗುವುದು ಹೇಗೆ ಸಹಜವೋ ಹಾಗೆಯೇ ಇಂದಿಗೂ ಮನೆಮಾತಾಗಿ ಉಳಿದಿರುವ ಒನಕೆಯ ಓಬವ್ವನ ಪರಾಕ್ರಮವೂ ಕಣ್ಣುಮುಂದೆ ಕಟ್ಟಿದಂತಾಗುತ್ತದೆ

ಒನಕೆ ಓಬವ್ವ ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮದ್ದಹನುಮಪ್ಪನ ಹೆಂಡತಿ. ಇವರನ್ನು ಕನ್ನಡ ನಾಡಿನ ವೀರವನಿತೆಯರಾದ ಕಿತ್ತೂರು ಚೆನ್ನಮ್ಮ,ರಾಣಿ ಅಬ್ಬಕ್ಕ ರ ಸಾಲಿನಲ್ಲಿ ಪರಿಗಣಿಸಲಾಗುತ್ತದೆ.

ವೀರವನಿತೆ ಒನಕೆ ಓಬವ್ವ
ಒನಕೆ ಓಬವ್ವ

ಹೈದರಾಲಿಯು ಚಿತ್ರದುರ್ಗದ ಮೇಲೆ ಹಟಾತ್ತಾಗಿ ಆಕ್ರಮಣ ಮಾಡಿದಾಗ ಓಬವ್ವೆಯು ತನ್ನ ಒನಕೆಯನ್ನು ಅಸ್ತ್ರವಾಗಿ ಇಟ್ಟುಕೊಂಡು ಶತ್ರುಗಳನ್ನು ಎದುರಿಸಿದ್ದಳು.ನೂರಾರು ಶತ್ರು ಸೈನಿಕರನ್ನು ತನ್ನ ಒನಕೆಯಿಂದಲೇ ಕೊಂದು ಕೊನೆಯಲ್ಲಿ ಎದುರಾಳಿಯು ಬೆನ್ನಹಿಂದೆ ಬಂದದ್ದನ್ನು ಗಮನಿಸಲಾಗದೆ ಶತ್ರುವಿನ ಕತ್ತಿಗೆ ಬಲಿಯಾದರು. ಅಂದಿನಿಂದ ಅವರಿಗೆ ಒನಕೆ ಓಬವ್ವ ಎಂದು ಬಿರುದು ಸಿಕ್ಕಿತು.

ಒನಕೆ ಓಬವ್ವ ಎಂಬ ಬಿರುದು ಬಂದ ಕಥೆ :
ಚಿತ್ರದುರ್ಗದ ಪಾಳೆಯಗಾರರಲ್ಲಿ ಕಡೆಯವನಾದ ಮದಕರಿನಾಯಕನಿಗೂ ಹೈದರನಿಗೂ ನಡೆದ ಕಾಳಗ ಇತಿಹಾಸದಲ್ಲಿದೆ. ಹೈದರ್ ಈ ಅಭೇದ್ಯ ದುರ್ಗವನನ್ನು ತಿಂಗಳುಗಟ್ಟಲೆ ಮುತ್ತಿಗೆ ಹಾಕಿ ಸ್ವಾಧೀನಪಡಿಸಿಕೊಳ್ಳಲಾರದೆ ಹೋದ. ಕಡೆಗೆ ತನ್ನ ಶತ್ರುವನ್ನು ತಂತ್ರದಿಂದ ಗೆಲ್ಲಬೇಕೆಂದು ಬಯಸಿ, ತನ್ನ ಬೇಹುಗಾರರನ್ನು ಕರೆದು ಕೋಟೆಯ ಕಳ್ಳದಾರಿಗಳನ್ನು ಪತ್ತೆಮಾಡಿ ತಿಳಿಸಬೇಕೆಂದು ಆಜ್ಞೆಮಾಡಿದ. ವೇಷಧಾರಿಗಳಾದ ಆ ಬೇಹುಗಾರರನ್ನು ಕೋಟೆಯ ಸುತ್ತಲೂ ಸುಳಿದಾಡುತ್ತಿರುವಾಗ, ಒಂದು ಪಾರ್ಶ್ವದಲ್ಲಿ ಒಬ್ಬ ಹೆಂಗಸು ಮೊಸರಿನ ಮಡಕೆಯನ್ನು ತಲೆಯ ಮೇಲೆ ಹೊತ್ತುಕೊಂಡು ಆ ಕೋಟೆಯ ಕಡೆ ನಡೆದು ಅದೃಶ್ಯಳಾದದ್ದು ಗಮನಕ್ಕೆ ಬಂತು. ಚಾರರು, ಆ ದಿಕ್ಕಿನಲ್ಲಿ ಎಲ್ಲಿಯೋ ಕಳ್ಳಗಿಂಡಿಯಿರಬೇಕೆಂದು ತರ್ಕಿಸಿ ಹುಡುಕತೊಡಗಿದಾಗ, ಬಂಡೆಗಳ ಮಧ್ಯೆ ನುಸುಳಿಕೊಂಡು ಹೋಗುವಂತೆ ಒಂದು ಇಕ್ಕಟ್ಟಾದ ಮಾರ್ಗವಿರುವುದು ಸ್ಪಷ್ಟವಾಯಿತು. ಈ ಸುದ್ದಿಯನ್ನು ಕೇಳಿದ ನವಾಬನಿಗೆ ತುಂಬ ಸಂತೋಷವಾಯಿತು. ಶತ್ರುಸೈನಿಕರು ಒಬ್ಬೊಬ್ಬರಾಗಿ ಆ ದಾರಿಯ ಮೂಲಕ ಒಳಕ್ಕೆ ಹೋಗಲು ನಿಶ್ಚಯಿಸಿಕೊಂಡರು.

ವೀರವನಿತೆ ಒನಕೆ ಓಬವ್ವ

ಆ ಕಳ್ಳದಾರಿಯ ಒಳಭಾಗಕ್ಕೆ ಸ್ವಲ್ಪ ದೂರದಲ್ಲಿಯೇ ಒಂದು ಕೊಳವೂ ಕಾವಲುಗಾರನ ಒಂದು ಬತೇರಿಯೂ ಇದ್ದುವು. ಸರ್ಪಗಾವಲು ಕಾಯುತ್ತಿದ್ದ ಕಾವಲುಗಾರ ಸ್ವಲ್ಪ ಬಿಡುವು ಮಾಡಿಕೊಂಡು ತನ್ನ ಗುಡಿಸಿಲಿನಲ್ಲಿ ಊಟಮಾಡುತ್ತಿರುವಾಗ್ಗೆ ಅವನ ಹೆಂಡತಿ ಓಬವ್ವ ನೀರು ತರಲೆಂದು ಕೊಳದ ಬಳಿಗೆ ಬಂದಳು. ಆ ವೇಳೆಗೆ ಕಳ್ಳಗಿಂಡಿಯ ಸಮೀಪದಲ್ಲಿ ಶತ್ರುಸೈನಿಕರು ಹೊಂಚುಹಾಕಿ, ಪಿಸಿಪಿಸಿ ಮಾತುಗಳನ್ನಾಡುತ್ತಿದ್ದುದು ಅವಳಿಗೆ ಕೇಳಿಸಿತು. ಆಕೆಗೆ ಆ ಸೂಕ್ಷದ ಅರಿವಾಗಿ, ಕೂಡಲೆ ಗುಡಿಸಲಿಗೆ ತೆರಳಿ ಒಂದು ತನ್ನ ಗಂಡನಿಗೆ ತಿಳಿಸಬೇಕು ಎನ್ನುವಷ್ಟರಲ್ಲಿ ಗಂಡ ಊಟಕ್ಕೆ ಕುಳಿತಿದ್ದ,ಎಬ್ಬಿಸಲು ಮನಸ್ಸಾಗದೆ ತಾನೆ ಏನೋ ಮಾಡಬೇಕು ಎಂದು ಒನಕೆಯನ್ನು ತೆಗೆದುಕೊಂಡು ಬಂದು ಆ ಕಳ್ಳಗಿಂಡಿಯ ಬಳಿ ನಿಂತಳು. ಅತ್ತ ಶತ್ರುಸೈನಿಕರು ಒಬ್ಬೊಬ್ಬರಾಗಿ ನುಸುಳಿ ಬರುವುದೇ ತಡ, ಓಬವ್ವ ಅವರ ತಲೆಯನ್ನು ಒನಕೆಯಿಂದ ಹೊಡೆದು ಕೆಡವುತ್ತಿದ್ದಳು. ಈ ಹತ್ಯೆ ಕೆಲಕಾಲ ಹೀಗೆಯೇ ಸಾಗಿತು. ಓಬವ್ವನ ಗಂಡ ಮನೆಯಲ್ಲಿ ತನ್ನ ಹೆಂಡತಿಯನ್ನು ಕಾಣದೆ ಹುಡುಕಿಕೊಂಡು ಕಳ್ಳಕಂಡಿಯ ಹತ್ತಿರಕ್ಕೆ ಬಂದಾಗ ಆಕೆಯ ಮುಂದೆ ಬಿದ್ದಿದ್ದ ಹೆಣದ ರಾಶಿಯನ್ನೂ ಹರಿಯುತ್ತಿದ್ದ ಕೆನ್ನೇರಿನ ಕಾಲುವೆಯನ್ನೂ ಕಂಡು ಕಂಗೆಟ್ಟ, ಆಕೆಯ ಹೆಸರು ಹಿಡಿದು ಕೂಗುತ್ತ ಮುಂದುವರಿಯಲು ವೀರಾವೇಶದಲ್ಲಿ ಮೈಮರೆತ್ತಿದ್ದ ಓಬವ್ವ ತನ್ನ ಗಂಡನನ್ನೂ ಹೊಡೆಯುವುದರಲ್ಲಿದ್ದಳು. ಗಂಡ ದೂರ ಸರಿದು, ಕೆಲಸ ಕೆಟ್ಟಿತೆಂದು ಎಣಿಸಿ ಕೂಡಲೆ ಕಹಳೆಯನ್ನು ಊದಿದ. ಆ ಎಚ್ಚರಿಕೆಯ ದನಿಯನ್ನು ಕೇಳಿದ ಒಡನೆಯೇ ಮದಕರಿನಾಯಕನ ಸೈನಿಕರು ಅತ್ತ ಧಾವಿಸಿಬಂದರು. ಶತ್ರುಸೈನಿಕರೊಂದಿಗೆ ಯುದ್ಧ ಮೊದಲಾಯಿತು. ಆ ಗೊಂದಲದಲ್ಲಿ ಶತ್ರುಸೈನಿಕನೊಬ್ಬನ ಪೆಟ್ಟಿಗೆ ಸಿಕ್ಕಿ ಓಬವ್ವ ಹತಳಾದಳು. ಮದಕರಿನಾಯಕನ ಸೈನಿಕರ ಕೈಮೇಲಾಗಲು ಶತ್ರುಗಳು ಮತ್ತೆ ಹಿಮ್ಮೆಟ್ಟಿದರು. ಕ್ಷಣಮಾತ್ರದಲ್ಲಿ ಅಸದೃಶವಾದ ಕೆಚ್ಚನ್ನು ತೋರಿ ಕಾಳಗದಲ್ಲಿ ಬಲಿಯಾದ ಓಬವ್ವನ ಸಲುವಾಗಿ ಎಲ್ಲರೂ ಕಣ್ಣೀರು ಸುರಿಸಿದರು. ಕಾವಲುಗಾರನ ಹೆಂಡತಿಯಾದ ಓಬವ್ವನ ಆ ಪರಾಕ್ರಮದ ಕುರುಹಾಗಿ ಆ ಕಳ್ಳಗಿಂಡಿಗೆ ಒನಕೆಯ ಓಬವ್ವನ ಕಂಡಿ ಎಂಬ ಹೆಸರು ಇಂದಿಗೂ ಪ್ರಚಲಿತವಾಗಿದೆ.

ಒನಕೆ ಓಬವ್ವರ ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ ಮರೆಯಲಾಗದ್ದು. ಅವರನ್ನು ಕರ್ನಾಟಕದ ವೀರವನಿತೆಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಚಿತ್ರದುರ್ಗದ ಆಟದ ಕ್ರೀಡಾಂಗಣಕ್ಕೆ ಒನಕೆ ಓಬವ್ವ ಕ್ರೀಡಾಂಗಣ ಎಂದು ಅವರ ಹೆಸರನ್ನಿಟ್ಟು ಗೌರವಿಸಲಾಗಿದೆ.

ಪುಟ್ಟಣ್ಣ ಕಣಗಾಲ್ ನಿರ್ದೇಶನದ  ನಾಗರಹಾವು  ಚಿತ್ರದಲ್ಲಿನ ಪ್ರಸಿದ್ಧ ಹಾಡಿನಲ್ಲಿ ಅವರ ವೀರೋಚಿತ ಪ್ರಯತ್ನವನ್ನು ಚಿತ್ರಿಸಲಾಗಿದೆ. ಈ ಚಿತ್ರದಲ್ಲಿ ನಟಿ ಜಯಂತಿ  ಅವರು ಓಬವ್ವನ ಪಾತ್ರ ಮಾಡಿದ್ದರು. ೨೦೧೯ರಲ್ಲಿ ಚಿತ್ರದುರ್ಗದ ಒನಕೆ ಓಬವ್ವ ಎನ್ನುವ ಸಿನಿಮಾದಲ್ಲಿ ತಾರಾ ಅನುರಾಧಾ ಅವರು ಒನಕೆ ಓಬವ್ವನಾಗಿ ಅಭಿನಯಿಸಿದ್ದಾರೆ.

ಒನಕೆ ಓಬವ್ವರ ಜನ್ಮ ದಿನವಾದ ನವೆಂಬರ್ 11ರಂದು ಒನಕೆ ಓಬವ್ವ ಜಯಂತಿಯನ್ನು ಆಚರಣೆ ಮಾಡುವಂತೆ ಘೋಷಿಸಲಾಗಿದೆ.

ಧನ್ಯವಾದಗಳು.

What do you think?

-1 Points
Upvote Downvote

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಅಭಿಮನ್ಯು

ವೀರ ಅಭಿಮನ್ಯು

ಪಿಸಿಒಡಿ

ಪಿಸಿಒಡಿ ಡಿಸೀಸ್ ಬಗೆಗಿನ ಕೆಲವೊಂದು ವಿಷಯ ಹಾಗೂ ಮನೆ ಮದ್ದು