in ,

ಅಪ್ರತಿಮ ದೇಶಭಕ್ತ ಭಾರತಮಾತೆಯ ವೀರ ಪುತ್ರ ಭಗತ್ ಸಿಂಗ್

ಅಪ್ರತಿಮ ದೇಶಭಕ್ತ ಭಾರತಮಾತೆಯ ವೀರ ಪುತ್ರ ಭಗತ್ ಸಿಂಗ್

ಭಗತ್ ಸಿಂಗ್ ಬಗ್ಗೆ ಎಲ್ಲೋ ಒಂದು ಪಾಠದಲ್ಲಿ ಓದಿರುತ್ತೇವೆ. ಆದರೆ ಸ್ವಲ್ಪ ಅಷ್ಟೇ, ಈಗಿನ ಮಕ್ಕಳಿಗೆ ಫೆಬ್ರವರಿ ೧೪ ಪ್ರೇಮಿಗಳ ದಿನ ಎಂದು ಗೊತ್ತು, ನಮ್ಮ ದೇಶಕ್ಕಾಗಿ ಹೋರಾಡಿದ ವೀರ ಭಗತ್ ಸಿಂಗ್ ಹುತಾತ್ಮರಾದ ದಿನ ಎಂದು ಏಷ್ಟು ಜನರಿಗೆ ಗೊತ್ತು.?

ಭಗತ್ ಸಿಂಗ್(೧೯೦೭–೧೯೩೧) ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರ. ಹುಟ್ಟಿದ್ದು ಜರನವಾಲಾ ತಾಲೂಕಿನ ಬಂಗಾ ಎಂಬ ಹಳ್ಳಿಯಲ್ಲಿ. ಅವರ ತಾಯಿ ಶ್ರೀಮತಿ ವಿದ್ಯಾವತಿ ಮತ್ತು ಜೀವ ವಿಮಾ ಕಂಪನಿಯಲ್ಲಿ ಏಜೆಂಟರಾಗಿ ವೃತ್ತಿ ಮಾಡುತ್ತಿದ್ದ ತಂದೆ ಕಿಶನ್ ಸಿಂಗ್. ಭಗತ್ ಮೇಲೆ ಅತೀವ ಪ್ರಭಾವವನ್ನು ಬೀರಿದ್ದವರೆಂದರೆ ಅವರ ಚಿಕ್ಕಪ್ಪ ಅಜಿತ್ ಸಿಂಗ್.ಅಜಿತ್ ಸಿಂಗರು ಉಗ್ರ ಭಾಷಣಕಾರರಾಗಿದ್ದು ರೈತರ ನಡುವೆ ಹಲವಾರು ಚಳುವಳಿಗಳನ್ನು ಸಂಘಟಿಸಿ ಬ್ರಿಟೀಷರು ಬಂಧನಕ್ಕೀಡು ಮಾಡಲು ಬಲೆ ನೇಯ್ದಿದ್ದರೂ ಸಿಗದೆ ಅವರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದರು. ಇದರೊಂದಿಗೆ ಜಲಿಯನ್ ವಾಲಾಬಾಗ್‌ನಲ್ಲಿ ಬ್ರಿಟೀಷರು ನಡೆಸಿದ ಮಾರಣಹೋಮದಿಂದುಂಟಾದ ರಕ್ತದ ಕೆಂಪು ಕಲೆ ಅವರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಬ್ಬಿಸಿ ಮನಸ್ಸಿನಲ್ಲಿ ಹೋರಾಟದ ಚಿತ್ತಾರ ಮೂಡಿಸಿತ್ತು.


ಪಂಜಾಬಿನ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ನಿರತರಾಗಿದ್ದು, ಲಾಹೋರ್ ಪಿತೂರಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಕರ್ತಾರ್ ಸಿಂಗ್ ಸರಭ್ ರವರನ್ನು 1915 ರಲ್ಲಿ ಅವರ 20 ನೇ ವಯಸ್ಸಿನಲ್ಲೇ ನೇಣಿಗೇರಿಸಲಾಗಿತ್ತು. “ರಾಷ್ಟ್ರ ವಿಮೋಚನೆಯೊಂದೇ ನನ್ನ ಗುರಿ. ಯಾವುದೇ ವ್ಯಕ್ತಿ, ರಾಷ್ಟ್ರ, ಧರ್ಮ ಅಥವಾ ಜನಾಂಗದ ಮೇಲೆ ದ್ವೇಷ ಸಾಧಿಸಲು ನಾನಾವುದನ್ನೂ ಮಾಡಿಲ್ಲ. ನನಗೆ ಬೇಕಾಗಿರುವುದೊಂದೆ – ಸ್ವಾತಂತ್ರ್ಯ. ಅದೊಂದೇ ನನ್ನ ಕನಸು” ಎಂಬ ಸರಭ್‌ರ ಕೊನೆಗಾಲದ ಮಾತುಗಳು ಅವರಲ್ಲಿ ಕ್ರಾಂತಿಯ ಉದ್ದೀಪನ ಹಚ್ಚಿದ್ದವು. ಇದು ಭಗತ್‌ರನ್ನು ಮೈನವಿರೇಳಿಸಿ ಸಾವಿಗೇ ಸವಾಲು ಹಾಕುವಂತಹ ಗುಣವನ್ನು ಮೈಗೂಡುವಂತೆ ಮಾಡಿತ್ತು.

ಅಪ್ರತಿಮ ದೇಶಭಕ್ತ ಭಾರತಮಾತೆಯ ವೀರ ಪುತ್ರ ಭಗತ್ ಸಿಂಗ್

ಭಗತ್ ಸಿಂಗ್ ಮೂಲತಃ ಒಬ್ಬ ನಾಟಕಗಾರ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಕಾಲೇಜು ದಿನಗಳಲ್ಲಿ ವೇದಿಕೆ ಪ್ರದರ್ಶನಗಳ ಮೂಲಕ ಹೆಸರುವಾಸಿಯಾಗಿದ್ದರು. ಅವರು ಅಭಿನಯಿಸುತ್ತಿದ್ದ ರಾಣಾ ಪ್ರತಾಪ ಮತ್ತು ಚಂದ್ರಗುಪ್ತ ಮೌರ್ಯ ಬಹುಮುಖ್ಯ ಪಾತ್ರಗಳು.

ಭಗತ್ ಸಿಂಗ್ ರವರ ಕೊನೆಯ ದಿನಗಳಲ್ಲಿ ಸಂಘಟನೆಯ ಬಹುತೇಕ ಮಂದಿ ಸೆರೆಮನೆಯಲ್ಲಿ ನ್ಯಾಯಾಲಯದ ಕುರಿತು ಚರ್ಚಿಸುತ್ತಿದ್ದಾಗ ರಾಜಗುರು ಮತ್ತು ಭಗತ್ಸಿಂಗ್ರಿಬ್ಬರೂ ಗಲ್ಲಿಗೇರುವುದು ಖಚಿತವೆಂದು ತಿಳಿದಿದ್ದರಿಂದ ಅವರನ್ನು ಹೊರತುಪಡಿಸಿ ತಮಾಷೆಗಾಗಿ ಒಬ್ಬರ ಮೇಲೊಬ್ಬರು ಗಲ್ಲು ಶಿಕ್ಷೆ ವಿಧಿಸಿಕೊಂಡು ನಗೆಯಾಡುತ್ತಿದ್ದರು.’ರಾಜಗುರು ಮತ್ತು ನನಗೆ ಏಕೆ ಶಿಕ್ಷೆ ವಿಧಿಸಲಿಲ್ಲ? ನಮ್ಮನ್ನು ಬಿಡುಗಡೆಗೊಳಿಸುತ್ತೀರೇನು?’ ಎಂದು ನಗುತ್ತಾ ಕೇಳಿದ ಭಗತ್ ಸಿಂಗ್ ಮಾತುಗಳು ಅವರಲ್ಲಿ ಕಂಪನ ಸೃಷ್ಟಿಸಿದವು.ಯಾರಲ್ಲಿಯೂ ಉತ್ತರವಿಲ್ಲದೆ ನಿಶ್ಯಬ್ಧ, ನಿರ್ಲಿಪ್ತತೆ ಆವರಿಸಿದವು. ಮತ್ತಷ್ಟು ಛೇಡಿಸುವ ಧ್ವನಿಯಲ್ಲಿ ‘ವಾಸ್ತವವನ್ನು ಗುರುತಿಸಲು ಭಯವೇ?’ ಎಂದು ಭಗತ್ ನುಡಿದಾಗ ಇನ್ನಷ್ಟು ನಿಶ್ಯಬ್ಧ ಮನೆಮಾಡಿ ಸೂತಕದ ವಾತಾವರಣ ಉಂಟಾಯಿತು. ನಿಶ್ಯಬ್ಧ ಮತ್ತು ಮೌನವನ್ನು ತನ್ನ ನಗುವಿನಿಂದ ಭೇಧಿಸುತ್ತಾ ಹೇಳಿದ:”ನಾವು ಸಾಯೋವರೆಗೆ ಕುತ್ತಿಗೆಗೆ ಕುಣಿಕೆ ಬೀರಿ ನಮ್ಮನ್ನು ನೇತು ಹಾಕುವುದು ನಿಜ, ಕಾಮ್ರೇಡ್ಸ್. ಇದು ನನಗೂ ಗೊತ್ತು. ನಿಮಗೂ ಗೊತ್ತು. ಮತ್ತೇಕೆ ಅದರತ್ತ ಕಣ್ಣು ಮುಚ್ಚಿಕೊಳ್ಳಬೇಕು?
ರಾಷ್ಟ್ರಾಭಿಮಾನಕ್ಕಾಗಿ ಸಿಗುವ ಅತ್ಯುನ್ನತ ಬಹುಮಾನ ಅದು. ಅದು ನನಗೇ ಸಿಗುತ್ತಿರುವುದರಿಂದ ನನಗೆ ಹೆಮ್ಮೆಯೇ. ನನ್ನ ಬಾಹ್ಯ ದೇಹವನ್ನು ನಾಶಗೊಳಿಸಿ ಈ ರಾಷ್ಟ್ರದಲ್ಲಿ ಅವರು ಸುರಕ್ಷಿತವಾಗಿರಬಹುದೆಂದು ಭಾವಿಸಿದ್ದಾರೆ. ಅದು ತಪ್ಪು ಕಲ್ಪನೆಯಷ್ಟೆ. ಅವರು ನನ್ನನ್ನು ಕೊಲ್ಲಬಹುದಾದರೂ, ನನ್ನ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲ. ವಿಚಾರಗಳಿಗೆ ಸಾವಿಲ್ಲ, ಸಿದ್ದಾಂತಗಳಿಗೆ ಅಳಿವಿಲ್ಲ. ಅವರು ನನ್ನ ದೇಹವನ್ನು ಪುಡಿಗಟ್ಟಹುದು. ಆದರೆ ನನ್ನ ಚೈತನ್ಯವನ್ನು ಪುಡಿಗಟ್ಟಲಾರರು.

ಬ್ರಿಟೀಷರು ಈ ನೆಲದಿಂದ ಕಂಬಿ ಕೀಳುವವರೆಗೂ ನನ್ನ ವಿಚಾರಗಳು ಅವರನ್ನು ಅನಿಷ್ಟದಂತೆ ಬೆಂಬಿಡದೆ ಕಾಡುತ್ತವೆ”. “ಇದು ಒಂದೆಡೆಯ ಚಿತ್ರಣವಷ್ಟೆ. ಮತ್ತೊಂದೆಡೆಯದ್ದು ಮತ್ತಷ್ಟು ಪ್ರಕಾಶಮಾನವಾಗಿ ಹೊಳೆಯುತ್ತಿದೆ. ಬ್ರಿಟೀಷ್ ಗುಲಾಮಕೋರರಿಗೆ ಜೀವಂತ ಭಗತ್ ಸಿಂಗ್ ಗಿಂತ ಸತ್ತ ಭಗತ್ ಸಿಂಗ್ ಹೆಚ್ಚು ಅಪಾಯಕಾರಿ. ನನ್ನನ್ನು ನೇಣಿಗೇರಿಸಿದ ನಂತರ, ನನ್ನ ಕ್ರಾಂತಿಕಾರಿ ವಿಚಾರಗಳ ಸುವಾಸನೆಯು ನಮ್ಮ ಸುಂದರನಾಡಿನ ವಾತಾವರಣದಲ್ಲಿ ಪಸರಿಸುತ್ತದೆ.
ಅವು ಯುವಜನರನ್ನು ಪ್ರೇರೇಪಿಸಿ ಸ್ವಾತಂತ್ರ್ಯ ಮತ್ತು ಕ್ರಾಂತಿಗಾಗಿ ಅವರನ್ನು ಹುಚ್ಚರನ್ನಾಗಿಸಿ ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ವಿನಾಶದಂಚಿಗೆ ತಳ್ಳುತ್ತವೆ. ಇದು ನನ್ನ ಖಚಿತಾಭಿಪ್ರಾಯ. ರಾಷ್ಟ್ರಕ್ಕಾಗಿ ನಾನು ಸಲ್ಲಿಸಿದ ಸೇವೆ ಮತ್ತು ನನ್ನ ಜನತೆಗಾಗಿ ತೋರಿದ ಪ್ರೀತಿಗಳಿಗೆ ನೀಡುವ ಅತ್ಯುನ್ನತ ಬಹುಮಾನವನ್ನು ನಾನು ಪಡೆಯುವ ದಿನವನ್ನು ಅತಿ ಕಾತುರತೆಯಿಂದ, ಸಂಭ್ರಮ ಸಡಗರದಿಂದ ಇದಿರು ನೋಡುತ್ತಿದ್ದೇನೆ”.

ಅಪ್ರತಿಮ ದೇಶಭಕ್ತ ಭಾರತಮಾತೆಯ ವೀರ ಪುತ್ರ ಭಗತ್ ಸಿಂಗ್

ಭಗತ್ ಸಿಂಗ್ ರು ಜೈಲಿನಲ್ಲಿ ಕಳೆದ ಕೊನೆಯ ದಿನಗಳಂದು ಅವರ ತಾಯಿಯ ದಿಟ್ಟತನದ ನುಡಿಗಳು ನಿಜಕ್ಕೂ ಆಪ್ಯಾಯಮಾನ: “ನಿನ್ನ ನಿಲುಮೆಯನ್ನು ಎಂದಿಗೂ ಬದಲಿಸಬೇಡ. ಪ್ರಪಂಚವೇ ಮರೆಯಲಾಗದ ಸಾವು ಎಂದಿಗೂ ಅತ್ಯುತ್ತಮವಾದದ್ದು. ‘ಇಂಕ್ವಿಲಾಬ್ ಜಿಂದಾಬಾದ್’ ಘೋಷಣೆಯನ್ನು ಕೊನೆಯವರೆಗೂ ಕೂಗುತ್ತಿರು. ಯಾವ ತಾಯಿಗೂ ಲಭಿಸದ ಹೆಮ್ಮೆ ನನಗುಂಟಾಗಿದೆ”.

ಜೈಲಿನ ವಾರ್ಡನ್ ಚರತ್ ರವರು ಭಗತ್ ಸಿಂಗ್ ಓದಲು ಬಯಸಿದ ಎಲ್ಲ ಪುಸ್ತಕಗಳನ್ನೂ ಜೈಲಿನ ಸೆಲ್ಲಿನೊಳಕ್ಕೆ ಕದ್ದು ತಂದುಕೊಡುತ್ತಿದ್ದರೂ ಭಗತ್ ಸಿಂಗ್ ಓದುವ ವೇಗಕ್ಕೆ ತಕ್ಕಂತೆ ಪುಸ್ತಕಗಳನ್ನೂ ಪೂರೈಸಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಸಾವಿನ ಕರೆಗಂಟೆಯಂತೆ ಸೈನಿಕ ನೊಬ್ಬ ನೇಣುಗಂಬಕ್ಕೆ ಎಳೆದೊಯ್ಯಲು ಬಂದಾಗಲೂ ಲೆನಿನ್ ಕುರಿತ ಪುಸ್ತಕವನ್ನೋದುತ್ತಿದ್ದ ಭಗತ್ಸಿಂಗ್ರು ಸ್ವಲ್ಪವೂ ವಿಚಲಿತರಾಗದೆ ಪುಸ್ತಕ ‘ಮುಗಿಸಿದ ನಂತರ ಬಂದರಾಗುತ್ತದಲ್ಲವೇನು?’ ಎಂದು ಸೈನಿಕನಿಗೆ ಗಂಭೀರವಾಗಿಯೇ ಕೇಳಿದುದು ನಿಜಕ್ಕೂ ಮೈನವಿರೇಳಿಸುತ್ತದೆ.
ಗಲ್ಲಿಗೇರಿಸುವ ದಿನ ಸಹ ಎದೆಗುಂದದೆ ಖುಷಿಯಿಂದಿದ್ದರು. ಗಲ್ಲು ಸ್ಥಳದ ಪ್ಲಾಟ್ಫಾರಂ ಮೇಲೆ ನಿಂತು ಹಗ್ಗಕ್ಕೆ ಮುತ್ತಿಕ್ಕುತ್ತಾ “ಇಂಕ್ವಿಲಾಬ್ ಜಿಂದಾಬಾದ್” ಘೋಷಣೆ ಮಾಡುತ್ತಾ ಸುಖ್ದೇವ್, ಭಗತ್ ಮತ್ತು ರಾಜಗುರು ಕುಣಿಕೆ ಬೀರಿಕೊಂಡರು. ಅಂದು ಸೆರೆಮನೆಯಲ್ಲಿ ಸ್ಮಶಾನಮೌನ ಆವರಿಸಿ, ಯಾರೊಬ್ಬರೂ ಆಹಾರ ಮುಟ್ಟಲಿಲ್ಲ. ಅವರನ್ನು ಗಲ್ಲಿಗೇರಿಸಿದ ವಿಷಯ ತಿಳಿಯದ ಅವರ ಸಂಬಂಧಿಕರು ಸಂಧಿಸಲು ಬಂದಾಗ ಗದ್ಗದಿತರಾದರು.
ಸಟ್ಲೆಜ್ ನದಿತೀರದಲ್ಲಿ ಕ್ರಾಂತಿಕಾರಿಗಳ ದೇಹವನ್ನು ರಹಸ್ಯವಾಗಿ ಸುಡುತ್ತಿರುವ ವಿಷಯ ತಿಳಿದು ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸತೊಡಗಿದರು. ಅಲ್ಲಿ ದೊರೆತದ್ದು ಅರೆಬರೆ ಸುಟ್ಟ ಕ್ರಾಂತಿಕಾರಿಗಳ ದೇಹದ ಬೂದಿಯಷ್ಟೆ. ಬ್ರಿಟಿಷರು ಭಗತ್ ಸಿಂಗ್ ನ್ನು ಕೊಂದದ್ದು ಅವರ ಸಾಮ್ರಾಜ್ಯಶಾಹಿ ಭೂಪಟಕ್ಕೆ ತಾವೇ ಚೂರಿಯಿಂದ ತಿವಿದುಕೊಂಡಂತಾಯಿತಷ್ಟೆ. ಭಗತ್ರನ್ನು ರಕ್ಷಿಸಲು ಗಾಂಧೀಜಿ ನಡೆಸಿದ ಪ್ರಯತ್ನಗಳನ್ನು ಪ್ರಶ್ನಿಸಿ ದೇಶದಾದ್ಯಂತ ಯುವಕರ ಪಡೆಯು ಅವರು ಸಿಕ್ಕಲ್ಲೆಲ್ಲ ಧಮಕಿ ಹಾಕತೊಡಗಿತು.
ಅಂಥಹದೊಂದು ಸಂದರ್ಭದಲ್ಲಿ ಅವರು ನೀಡಿದ ಉತ್ತರ ಎಂಥಹವರಲ್ಲೂ ವೇದನೆ ಮೂಡಿಸದಿರದು: “ಭಗತ್ಸಿಂಗ್ರನ್ನು ರಕ್ಷಿಸಲು ನನಗಿಚ್ಚೆಯಿರಲಿಲ್ಲವೆಂಬುದು ಸತ್ಯಕ್ಕೆ ದೂರವಾದದ್ದು. ಆದರೆ ನೀವು ಭಗತ್ಸಿಂಗ್ ಎಸಗಿರುವ ತಪ್ಪನ್ನೂ ಅರ್ಥಮಾಡಿಕೊಳ್ಳಬೇಕು”. ಆದರೆ ಹಿಂಸೆಯ ಕುರಿತೂ ಬೇಸತ್ತಿದ್ದ ಭಗತ್ಗೆ ಗಾಂಧಿಯ ‘ಬೇಜವಾಬ್ದಾರಿ ಯುವಕರು’ ಎಂಬ ವರ್ಣನೆ ಕಿರಿಕಿರಿ ಉಂಟು ಮಾಡಿತ್ತು.
ಸ್ವಾತಂತ್ರ್ಯವನ್ನು ಬ್ರಿಟಿಷರಿಂದ ಕಿತ್ತುಕೊಳ್ಳಬೇಕೇ ಹೊರತು ಅದೇನೂ ಆಕಾಶದಿಂದ ಬೀಳುವುದಿಲ್ಲ ಅಥವಾ ಚಳುವಳಿಗಳನ್ನು ಹಿಂತೆಗೆದುಕೊಂಡು ಶಾಂತಿಯ ಹೋಮ ಮಾಡಿದರೆ ಬರುವುದಲ್ಲವೆಂದು ಭಗತ್ ರಿಗೆ ತಿಳಿದಿತ್ತು. ಕ್ರಾಂತಿಕಾರಿಗಳೆಂದರೆ ಕ್ರೌರ್ಯ, ಬೀಭತ್ಸತೆಗಳ ಮುಖವಾಡ ಹೊದ್ದವರೆಂದು ಭಾವಿಸುವವರು ಭಗತ್ರ ತೇಜಸ್ಸು ತುಂಬಿದ ಮುಖವನ್ನು ನೋಡಿದಲ್ಲಿ ಅವನೊಬ್ಬ ಅಸಾಧಾರಣ ಅದ್ಭುತವೇ ಸರಿಯೆನಿಸುತ್ತದೆ.


ಭಗತ್ ಸಿಂಗ್ ಯಾವುದೇ ಕ್ಷಣದಲ್ಲೂ ಸಹ ಸಾಧಕನ ಮೂರ್ತಿವೆತ್ತ ಪ್ರತಿಮೆಯಂತಿದ್ದರು. ಮನುಷ್ಯನಿಂದ ಮನುಷ್ಯನ ಶೋಷಣೆಯನ್ನು ಕೊನೆಗಾಣಿಸುವುದೇ ಅಂತಿಮ ಧ್ಯೇಯವೆನ್ನುವ ಅವರ ಮಾತುಗಳು, ಅವರಲ್ಲಿಯ ಮಾನವತೆಯು ಹೆಬ್ಬಂಡೆಯೊಳಗೆ ಅರಳಿ ನಿಂತಿರುವ ಹೂವುಗಳಂತೆ ಸದಾ ರಾರಾಜಿಸುತ್ತಿತ್ತು. ಸದಾ ಕತ್ತಿಯ ಅಲುಗಿನ ಮೇಲೆಯೇ ನಡೆಯುತ್ತಿದ್ದ ಯುವಜನರ ಆಸ್ಫೋಟಕ ಧ್ವನಿ ಇನ್ನಿಲ್ಲದಂತಾದರೂ ಅಂಥಹ ಸಾವಿರಾರು ಪ್ರತಿಧ್ವನಿಗೆ ಕಾರಣವಾಗುವಲ್ಲಿ ಯಶಸ್ವಿಯಾದರು.
ಅವರ ಸಾವು ಸ್ವಾತಂತ್ರ್ಯದ ಕಿಡಿಯನ್ನು ದೇಶಾದ್ಯಂತ ಮತ್ತಷ್ಟು ವ್ಯಾಪಿಸಿ ಯುವಜನರಲ್ಲಿ ವಿದ್ಯುತ್ ಸಂಚಲನ ಉಂಟುಮಾಡಿತು. ಭಗತ್ ಸಿಂಗ್ ಭವಿಷ್ಯವಾಣಿ ಸುಳ್ಳಾಗಲಿಲ್ಲ. ಅವರ ಹೆಸರು ಸಾವಿಗಳುಕದ ಧೈರ್ಯ, ತ್ಯಾಗ ಬಲಿದಾನ, ರಾಷ್ಟ್ರಾಭಿಮಾನ ಮತ್ತು ತದೇಕಚಿತ್ತತೆಯ ಹೋರಾಟಗಳ ಪ್ರತೀಕವಾಯಿತು. ಅವರ ‘ಇಂಕ್ವಿಲಾಬ್ ಜಿಂದಾಬಾದ್ (ಕ್ರಾಂತಿ ಚಿರಾಯುವಾಗಲಿ)’ ಘೋಷಣೆಯು ಇಡೀ ರಾಷ್ಟ್ರದ ಯುದ್ದದ ಕೂಗಾಗಿ ಮಾರ್ಪಟ್ಟು ಸಮಾಜವಾದಿ ಸಮಾಜ ನಿರ್ಮಾಣದ ಕನಸನ್ನು ವಿದ್ಯಾವಂತ ಯುವಜನರಲ್ಲಿ ಹಿಡಿದಿಟ್ಟಿತು.
೧೯೩೦-೩೨ ರಲ್ಲಿ ಎಲ್ಲ ಜನರು ಒಂದೇ ಮನುಷ್ಯನಂತೆ ನಿಂತರು. ಸೆರೆಮನೆವಾಸಗಳು, ಛಡಿಯೇಟುಗಳು, ಮತ್ತು ಲಾಠಿಯೇಟುಗಳು ಅವರ ಸ್ಫೂರ್ತಿಯನ್ನು ಕಂಗೆಡಿಸಲು ಸಾಧ್ಯವಾಗಲಿಲ್ಲ. ೧೯೪೫-೪೬ ರಲ್ಲಿ ನವಭಾರತ ಉದಯಿಸಿದ್ದನ್ನು ಇಡೀ ಪ್ರಪಂಚವೇ ಕಣ್ಣಾರೆ ಕಂಡಿತು. ಕಾರ್ಮಿಕರು, ರೈತರು, ವಿದ್ಯಾರ್ಥಿಗಳು, ಯುವಜನರು, ಜಲಸೇನೆ, ಭೂಸೇನೆ, ವಾಯುಸೇನೆ, ಮತ್ತು ಪೊಲೀಸರು ಸಹ ಬಲವಾದ ಹೊಡೆತಗಳನ್ನನುಭವಿಸಿದರು.
೧೯೩೦ ರವರೆಗೆ ಕೆಲವೇ ಕೆಲವರಲ್ಲಿದ್ದ ತ್ಯಾಗ, ಬಲಿದಾನ ಮತ್ತು ಅರ್ಪಣಾ ಮನೋಭಾವನೆಗಳು ಸಮೂಹ ಪ್ರಕ್ರಿಯೆಯಾಗಿ ರಾಷ್ಟ್ರಾದ್ಯಂತ ದಂಗೆಯು ವ್ಯಾಪಿಸಿತು. ಭಗತ್ ಸಿಂಗ್ ಅವರಿಗೆ ಸ್ವಾತಂತ್ರ್ಯ ಸಿಗುವ ಕುರಿತು ಯಾವುದೇ ಅನುಮಾನವಿರಲಿಲ್ಲವಾದರೂ ಅವರು ಆತಂಕ ಗೊಂಡಿದದ್ದು ಬಿಳಿ ಸಾಹೇಬರು ಖಾಲಿ ಮಾಡಿದ ಆಸನದಲ್ಲಿ ಕಂದು ಸಾಹೇಬರು ಕುಳಿತುಕೊಳ್ಳುವರೆಂಬ ಭಯದಿಂದ. ‘ಕೇವಲ ಯಜಮಾನರ ಬದಲಾವಣೆಯಿಂದ ಸ್ವಾತಂತ್ರ್ಯ ಬಂದಂತಾಗುವುದಿಲ್ಲ.
ಪುರಾತನ ವ್ಯವಸ್ಥೆಯನ್ನು ನಾಶಮಾಡದೆ ಹೊಸ ಬದಲಾವಣೆಯನ್ನು ತರುವುದು ಸಾಧ್ಯವಿಲ್ಲ’ ಎಂದು ಭಗತ್ ಸಿಂಗ್ ರವರಿಗೆ ಮನವರಿಕೆಯಾಗಿತ್ತು. ಆದರೆ ಪ್ರತಿಭಟನೆಯ ದಿವ್ಯ ಜ್ಯೋತಿ ಆರದಂತೆ ಉರಿಯಲು ತನ್ನಂಥವರು ಸಾಯಲೇಬೇಕೆಂದು ಭಗತ್ ನಂಬಿದ್ದ. ಮಾರ್ಚ್ ೨೩ ೧೯೩೧ ರಂದು ಇವರನ್ನು ಬ್ರಿಟಿಷ್ ಸರ್ಕಾರವು ಗಲ್ಲಿಗೇರಿಸಿತು. . ಭಗತ್ ಸಿಂಗ್ ಸಂಪೂರ್ಣ ನಾಸ್ತಿಕ ಮತ್ತು ಜಾತಿವಿರೋಧಿಯಾಗಿದ್ದರು ಸಾಯುವ ಕೆಲವೇ ನಿಮಿಷಗಳ ಮೊದಲು ಪ್ರಾರ್ಥನೆಯಂತೆ ಭಗತ್ ನುಡಿದ ಮಾತುಗಳು ಎಂಥವರನ್ನೂ ಕೆಚ್ಚೆದೆಯ ಉತ್ತುಂಗಕ್ಕೇರಿಸಬಲ್ಲವು. *’ಮೊದಲು ನಿಮ್ಮ ವೈಯುಕ್ತಿಕತೆಯನ್ನು ನುಚ್ಚುನೂರು ಮಾಡಿ, ವೈಯುಕ್ತಿಕ ಸುಖದ ಕನಸನ್ನು ಭಗ್ನಗೊಳಿಸಿ, ನಂತರ ಕೆಲಸ ಮಾಡಲು ತೊಡಗಿ. ನೀವು ಒಂದೊಂದೇ ಅಂಗುಲ ಮುಂದಕ್ಕೆ ಸಾಗಬೇಕು. ಅದಕ್ಕೆ ಧೈರ್ಯ ಬೇಕು; ದೃಡ ನಿರ್ಧಾರ ಬೇಕು; ನಿರಂತರ ಪರಿಶ್ರಮ ಬೇಕು. ಯಾವ ಕಷ್ಟ ಕಾರ್ಪಣ್ಯಗಳೂ ನಿರಾಶೆಗೊಳಿಸುವುದಿಲ್ಲ. ಯಾವ ವೈಫಲ್ಯಗಳೂ, ನಿಮ್ಮನ್ನು ಕಂಗೆಡಿಸುವುದಿಲ್ಲ. ತ್ಯಾಗ ಮತ್ತು ನರಳಾಟಗಳ ಅಗ್ನಿದಿವ್ಯವನ್ನು ಹಾದು ನೀವು ವಿಜಯಶಾಲಿಗಳಾಗುತ್ತೀರಿ. ಈ ವೈಯುಕ್ತಿಕ ಗೆಲುವುಗಳು ಕ್ರಾಂತಿಯ ಬಹುದೊಡ್ಡ ಆಸ್ತಿ..

ಹೀಗೆ ನಾವು ಇಂದು ಅಧಿಕಾರಕ್ಕಾಗಿ ಹೊರಡುತ್ತೇವೆ ಎಂದರೆ ಇಂತಹ ದೇಶಭಕ್ತರ ಋಣ. ಅವರ ಪ್ರಾಣ ಲೆಕ್ಕಿಸದೆ ನಮಗೆ ಸ್ವತಂತ್ರ ತಂದುಕೊಟ್ಟ ಮಹಾವೀರರ ಕೊಡುಗೆ.ಅವರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ. ಜೈ ಭಾರತ್ ಮಾತಾ.

ಧನ್ಯವಾದಗಳು

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕಾಮಕಸ್ತೂರಿ

ಬಹು ಉಪಯೋಗಿ ಕಾಮಕಸ್ತೂರಿ ಇದರ ಬೀಜದಿಂದ ಎಷ್ಟೆಲ್ಲಾ ಅರೋಗ್ಯ ಲಾಭವಿದೆ

ಕರಿಬೇವು

ಕರಿಬೇವು ಸೊಪ್ಪಿನ ಮಹತ್ವ ತಿಳಿಯಿರಿ